- Advertisement -Newspaper WordPress Theme
ಹೋರಾಟ ವೀರರುಹೋರಾಟದ ಬದುಕಲ್ಲಿ ಮರೆಯಾದ ಸ್ವಾತಂತ್ರ್ಯ ವೀರ ಯಮನಪ್ಪ ಅವಟಿ

ಹೋರಾಟದ ಬದುಕಲ್ಲಿ ಮರೆಯಾದ ಸ್ವಾತಂತ್ರ್ಯ ವೀರ ಯಮನಪ್ಪ ಅವಟಿ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಹೋರಾಟಗಾರರು ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟು ಅವಿಸ್ಮರಣೀಯವಾದ ಹೋರಾಟ ನಡೆಸಿದವರಲ್ಲಿ ನಮ್ಮ ವಿಜಯಪುರ ಜಿಲ್ಲೆಯ ಯಮನಪ್ಪ ಕಲ್ಲಪ್ಪ ಅವಟಿ (Yamanappa Aawati) ಕೂಡಾ ಪ್ರಮುಖರು.

ಯಮನಪ್ಪ ಅವಟಿಯವರು (Yamanappa Aawati) ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದವರು. 01-03-1919 ರಲ್ಲಿ ಜನಿಸಿದ ಅವರು. ಸ್ವಾತಂತ್ರ್ಯ ಹೋರಾಟ, ಸ್ವಾಭಿಮಾನ, ಸ್ವದೇಶಿತನವನ್ನು ಬಾಲ್ಯದಲ್ಲಿಯೇ ಅಳವಡಿಸಿಕೊಂಡರು. ತಮ್ಮ ಏಳನೇಯ ತರಗತಿಯಲ್ಲಿಯೇ ಗುರುಗಳಾದ ಸಿಂಪಿ ಲಿಂಗಣ್ಣರವರ ಪ್ರಭಾವದಿಂದ ರಾಷ್ಟ್ರೀಯ ಆಂದೋಲನದಲ್ಲಿ ಧುಮುಕಿದರು. ತಾಲೂಕಾ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಸದಸ್ಯರಾಗಿ ಜನಸೇವೆ ಮಾಡಿದರು. ಬ್ರಿಟಿಷರ ನಡೆಸುತ್ತಿದ್ದ ದಬ್ಬಾಳಿಕೆ, ಅವರ ದುರಾಡಳಿತಕ್ಕೆ ಸೋತು ಹೋಗಿದ್ದ ಭಾರತೀಯರಿಗೆ ಸ್ವಾತಂತ್ರ್ಯ ದೊರಕಿಸಲೇಬೇಕೆಂದು ಪಣ ತೊಟ್ಟರು.

1940 ರಲ್ಲಿ ಗಾಂಧೀಜಿಯವರ ಸತ್ಯಾಗ್ರಹ ಕರೆಯ ಮೆರೆಗೆ ವಿಜಯಪುರ ಜಿಲ್ಲೆಯ ರೆಬಿನಾಳ ಗ್ರಾಮದಲ್ಲಿ ಸತ್ಯಾಗ್ರಹ ಮಾಡುವುದರ ಮೂಲಕ ಸ್ವಾತಂತ್ರ್ಯ ಆಂದೋಲನದಲ್ಲಿ ಧುಮುಕಿದರು. ಇದರ ಪರೀಣಾಮವಾಗಿ ವಿಜಾಪುರ, ಇಸಾಪೂರ, ಯರವಾಡಾ ಸೆರೆಮನೆಗಳಲ್ಲಿ ಆರು ತಿಂಗಳುಗಳ ಕಾಲ ಶಿಕ್ಷೆ ಅನುಭವಿಸಿದರು. ಜೈಲಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು, ಆಗ ಬ್ರಿಟಿಷ್ ಅಧಿಕಾರಿಗಳು ಇವರಿಗೆ ಕ್ಷಮೆ ಕೇಳಿದರೆ ಬಿಡುವುದಾಗಿ ತಿಳಿಸಿದಾಗ ಅವರ ಮಾತನ್ನು ನಿರ್ಧಾಕ್ಷಿಣವಾಗಿ ದಿಕ್ಕರಿಸಿ ಸ್ವಾಭಿಮಾನ ಮೆರೆಯುತ್ತಾರೆ.

ಬಸವನಬಾಗೇವಾಡಿ ತಾಲೂಕಿನ ಅರಳಿಚಂಡಿ ಗ್ರಾಮದಲ್ಲಿ ವಾಲಂಟರಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಅವಟಿಯವರು (Yamanappa Aawati), ನೌಕರಿ ಬಿಟ್ಟು ಸತ್ಯಾಗ್ರಹ ಮಾಡಲಾಗಿದ್ದರಿಂದ ಇವರ ಶಾಲೆಗೆ ಬರಬೇಕಿದ್ದ ಗ್ರಾಂಟ್ ಹಣವನ್ನು ಸರಕಾರ ತಡೆಹಿಡಿದು, ಆರ್ಥಿಕ ಮುಗ್ಗಟ್ಟಿನಿಂದ ಇವರು ತೊಂದರೆ ಅನುಭವಿ ಸುವಂತಾಯಿತು. ಆಂಗ್ಲರ ಷಡ್ಯಂತರಗಳಿಗೆ ಬಗ್ಗದೇ ಧೈರ್ಯವಾಗಿ ಎದುರಿಸುತ್ತಾ ತಮ್ಮ ರಾಷ್ಟ್ರೀಯ ಚಳುವಳಿಗಳನ್ನು ಮುಂದುವರೆಸಿದ್ದರು.

1942 ರಲ್ಲಿ ಚಲೇಜಾವ್ ಚಳುವಳಿಯಲ್ಲಿಪುನಃ ಅನೇಕ ಕಡೆಗಳಲ್ಲಿ ಉಗ್ರ ಹೋರಾಟ ಮಾಡಿದರು. ತಾರ ತಂತಿಗಳನ್ನು ಕತ್ತರಿಸಿದರು. ಜನರನ್ನು ಸಂಘಟಿಸಿ ಸ್ವತಂತ್ರ್ಯ ಗುಂಪು ಕಟ್ಟಿಕೊಂಡರು. ಅಂಬಲಿ ಚನ್ನಬಸಪ್ಪ ಅವರ ನೇತೃತ್ವದಲ್ಲಿ ಜುಮನಾಳ ರೈಲ್ವೆ ನಿಲ್ದಾಣವನ್ನು ಸುಟ್ಟು ಹಾಕಿದರು. ಸ್ಥಳದಲ್ಲಿಯೇ ಪೊಲೀಸರ ಕೈಗೆ ಸಿಕ್ಕಿ ಬಿದ್ದರು, ಆದರೂ ಬ್ರಿಟಿಷ್ ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾದರು. ಆಗ ಮನೆ, ಮಡದಿ, ಮಕ್ಕಳನ್ನು ಬಿಟ್ಟು ಐದು ತಿಂಗಳ ಕಾಲ ಭೂಗತರಾದರು.

ಆಗ ಕಾಲೂಕಾ ಕಾಂಗ್ರೆಸ್ ಕಮಿಟಿ ಕಾರ್ಯದರ್ಶಿಗಳಾಗಿದ್ದರು. ರಾಮಣ್ಣ ಕಲ್ಲೂರವರು ಬಸವನಬಾಗೇವಾಡಿ ತಾಲೂಕಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇವರು ಪರಾರಿಯಾದ ಪರೀಣಾಮ ಒಬ್ಬರು ಪೊಲೀಸರನ್ನು ಸಸ್ಪೆಂಡ್ ಮಾಡಲಾಯಿತು. ಸ್ವತಃ ಕಲ್ಲೂರವರೇ ಇವರನ್ನು ಅಡಗಿಟ್ಟಿ ಸಿದ್ದಾರೆ ಎಂಬ ಆಪಾದನೆ ಮೆರೆಗೆ ಸೆರೆಹಿಡಿದು, ಅವರನ್ನು ನಾಲ್ಕು ತಿಂಗಳುಗಳ ಕಾಲ ಹಿಂಡಲಗಾ ಸೆರೆಮನೆಗೆ ಕಳುಹಿಸಲಾಯಿತು. ಇದರ ಪರೀಣಾಮ ಹೆಂಡತಿ ಮಕ್ಕಳು ಬೀದಿ ಪಾಲಾಗಿ, ಬಿಕ್ಷೆ ಬೇಡುವಂತಹ ಪರಿಸ್ಥಿತಿ ಎದುರಾಯಿತು.

ಈ ಸುದ್ದಿಯನ್ನೂ ನೋಡಿ… ಕರ್ನಾಟಕ ಇತಿಹಾಸ

ಅವಟಿ (Yamanappa Aawati) ಅವರು ಭೂಗತರಾಗಿದ್ದ ಸಮಯದಲ್ಲಿ, ನಾಗಠಾಣ ಗ್ರಾಮ ಗುಪ್ತ ಚಟುವಟಿಕಾ ಕೇಂದ್ರವಾಗಿತ್ತು. ಜನರನ್ನು ಸಂಘಟಿಸಿ ಪ್ರತಿನಿತ್ಯಹೋರಾಟದ ಚಟುವಟಿಕೆಗಳು ನಡೆಯುತ್ತಿದ್ದವು. ಈ ಕಾರಣದಿಂದ ನಾಗಠಾಣ ಗ್ರಾಮಕ್ಕೆ ಬ್ರಿಟಿಷ್ ಸರಕಾರವು 12,000 ರೂ. ಹೆಚ್ಚಿನ ಕಂದಾಯ ವಿಧಿಸಿ ಆರ್ಥಿಕವಾಗಿ ತೊಂದರೆ ಕೊಟ್ಟರು. ಇವರು ಪರಾರಿಯಾಗಿದ್ದ ಸಂದರ್ಭಗಳಲ್ಲಿ ಇವರ ಮನೆಗಳಲ್ಲಿ ಪೊಲೀಸರ ಗಸ್ತು ಇರುತ್ತಿತ್ತು. ಉಪವಾಸದೇ ಇಲ್ಲದೇ ತೋಟಗಳಲ್ಲಿ ಅಲೆದು ಬದುಕುತಿದ್ದರು.

ವೇಷ ಮರೆಸಿಕೊಂಡು ಆಂದೋಲನ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸಿದ್ದರು. ಅಂದಿನ ಕಾಲೇಜು ವಿದ್ಯಾರ್ಥಿ ಯಾಗಿದ್ದ ಸಿರಗುಪ್ಪಿ ಹಾಗೂ ಅವಟಿಯವರು ತಿಡಗುಂದಿ ಧರ್ಮ ಶಾಲೆ ಸುಟ್ಟ ಬಗ್ಗೆ ಅಫರಾಧಿಗಳೆಂದು ಪರಿಗಣಿಸಲಾಯಿತು. ತಾವೇ ಸ್ವತಃ ಒಬ್ಬ ಮಿತ್ರನ ಒಳಿತಿಗೋಸ್ಕರ ಪೊಲೀಸರಿಗೆ ಸಿಕ್ಕುಬಿಟ್ಟರು. ಮೂರು ತಿಂಗಳ ಕಾಲ ವಿಜಾಪುರ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸಿದರು.

ಸ್ವಾತಂತ್ರ್ಯ ನಂತರ 1953 ರಲ್ಲಿ ಸ್ಕೂಲ್ ಬೋರ್ಡನಲ್ಲಿ ಮುಂಬಯಿ ಸರ್ಕಾರದಿಂದ ಪುನಃ ಶಿಕ್ಷಕರಾಗಿ ಸೇವೆಗೆ ಹಾಜರಾದರು. ಇವರು 1953 ರಲ್ಲಿ ಹಿಂದಿ ವಿಷಯ ತೆಗೆದುಕೊಂಡು ಎಸ್.ಎಸ್.ಎಲ್.ಸಿ ಪಾಸಾದರು. ನಂತರ ಬಾಗಲಕೋಟೆಯಲ್ಲಿ ಶಿಕ್ಷಕ ತರಬೇತಿ ಮುಗಿಸಿದರು. ಇವರಿಗೆ ಹಿಂದಿ ಮತ್ತು ಗಣಿತದಲ್ಲಿ ಅತೀ ಆಸಕ್ತಿ ಇತ್ತು. ಸಧಾ ಪುರಾಣ, ಪ್ರವಚನ ಪ್ರಿಯರಾಗಿದ್ದರು. ಅವುಗಳ ಪಠಣ ಭೋದನೆಗಳಲ್ಲಿ ನಿರತರಾಗಿರುತ್ತಿದ್ದರು. ತಮ್ಮ ಕೊನೆಗಾಲ ನಿವೃತ್ತಿ ಯೊಂದಿಗೆ ಸ್ವ ಗ್ರಾಮ ಇಂಗಳೇಶ್ವರದಲ್ಲಿ ಬದುಕಿದರು. ಜೀವನದುದ್ದಕ್ಕೂ ನಿರಂತರವಾಗಿ ಹೋರಾಟ ಮಾಡುತ್ತಲೇ ಬದುಕಿದ ಅವಟಿಯವರು (Yamanappa Aawati) 24- 01- 1996 ರಲ್ಲಿ ಮರಣ ಹೊಂದಿದರು.

ಕುಗ್ರಾಮಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿ ಸ್ವಾಭಿಮಾನದ ಬದುಕು ಸವೆಸಿದ ಯಮನಪ್ಪ ಅವಟಿ (Yamanappa Aawati) ಯವರ ಹೋರಾಟದ ಬದುಕು ಅವಿಸ್ಮರಣೀಯ. ಅವರ ಹೋರಾಟದ ಬದುಕಿಗೆ ಸರಕಾರ ಸೇರಿದಂತೆ ಅನೇಕ ಸಂಘ, ಸಂಸ್ಥೆಗಳಿಂದ ಸನ್ಮಾನ, ಪ್ರಶಸ್ತಿಗಳನ್ನು ನೀಡಿ ಗೌರವ ಸಲ್ಲಿಸಲಾಗಿದೆ.
ಸಾಮಾಜಿಕ ಸೇವೆಗಳು:
 ಇಂಗಳೇಶ್ವರ ಗ್ರಾಮದಲ್ಲಿ ಅನೇಕ ಗಿಡಗಳನ್ನು ನೆಟ್ಟು ವಿಶ್ರಾಂತಿ ಧಾಮಗಳನ್ನು ನಿರ್ಮಿಸಿದ್ದಾರೆ.
 1943 ರಲ್ಲಿ ವಿಜಾಪುರ ಬರಗಾಲ ಬಂ ದೊದಗಿದಾಗ ಬಸವನಬಾಗೇವಾಡಿ ತಾಲೂಕಿನಲ್ಲಿ ಜನ ಸೇವೆ ಮಾಡಿದರು.
 ಹರ್ಡೇಕರ ಮಂಜಪ್ಪನವರ ನಿಧನದಿಂದ ಆಲಮಟ್ಟಿಯಲ್ಲಿ ಇದ್ದ ಸಂಸ್ಕೃತ ಪಾಠಶಾಲೆ ನಿಂತು ಹೋಯಿತು. ಅದನ್ನು ಬಂಥನಾಳ ಶಿವಯೋಗಿಗಳ ಅಪ್ಪಣೆ ಮೆರೆಗೆ ಇಂಗಳೇಶ್ವರದಲ್ಲಿ ಬಹಳ ವರ್ಷ ನಡೆಸಿಕೊಂಡು ಹೋದರು.
 ಕಾಂಗ್ರೇಸ್ ನಲ್ಲಿ ಸದಸ್ಯರಾಗಿ, ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು.
 ಅರಳಿಚಂಡಿಯಲ್ಲಿ ಪ್ರಪ್ರಥಮವಾಗಿ ಶಾಲೆ ಪ್ರಾರಂಭಿಸಿದರು.
 ಇಂಗಳೇಶ್ವರ ಗ್ರಾಮಪಂಚಾಯತ, ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದರು.
 ಕೊನೆಯವರೆಗೂ ಗೌರವಾನ್ವಿತ ಶಿಕ್ಷಕರಾಗಿ ಇಂಗಳೇಶ್ವರ, ಅರಳಿಚಂಡಿ, ಬೊಮ್ಮನಹಳ್ಳಿ, ಇವಣಗಿ ಗ್ರಾಮಗಳಲ್ಲಿ ತಮ್ಮ ಪ್ರಭಾವ ಬೀರಿದರು.
 ಮಸಬಿನಾಳ ಗ್ರಾಮದ ಸೊನ್ನದ ಶ್ರೀಗಳವರ ಪ್ರೇರಣೆಯಿಂದ ಅನೇಕ ಸಮಾಜ ಸೇವೆ ಮಾಡಿದರು.

“ತಮ್ಮ ಕೊನೆಗಾಲ ನಿವೃತ್ತಿಯೊಂದಿಗೆ ಸ್ವಂತ ಗ್ರಾಮ ಇಂಗಳೇಶ್ವರದಲ್ಲಿ ಬದುಕಿ ತಮ್ಮ ಅವಿಸ್ಮರಣಿಯ ಬದುಕಿನಲ್ಲಿ ನಿರಂತರವಾಗಿ ಹೋರಾಟ ಮಾಡಿ 24-01-1996 ರಲ್ಲಿ ತಮ್ಮ ಕೊನೆಯುಸಿರೆಳೆದರು. ಮಕ್ಕಳು, ನಾಗರಿಕರು ಪಥಸಂಚಲನದೊಂದಿಗೆ ಗೌರವ ಸಮರ್ಪಿಸಿದರು”
ಬಸವರಾಜ ಶ. ಅವಟಿ ಇಂಗಳೇಶ್ವರ

– ನಾಗೇಶ ನಾಗೂರ

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!