- Advertisement -Newspaper WordPress Theme
ಹೋರಾಟ ವೀರರುಪ್ರಾಣ ಬಿಟ್ಟೇನು ಸತ್ಯಾಗ್ರಹವನ್ನಲ್ಲ...! ವಿಜಯಪುರದ ಆ ದೇಶಪ್ರೇಮಿ ಯಾರು ಗೊತ್ತಾ..?

ಪ್ರಾಣ ಬಿಟ್ಟೇನು ಸತ್ಯಾಗ್ರಹವನ್ನಲ್ಲ…! ವಿಜಯಪುರದ ಆ ದೇಶಪ್ರೇಮಿ ಯಾರು ಗೊತ್ತಾ..?

ಸ್ವಾತಂತ್ರ್ಯ ಹೋರಾಟಗಾರರು ಎಂದಾಕ್ಷಣ ನಮ್ಮ ನಿಮ್ಮೆಲ್ಲರ ಕಣ್ಮುಂದೆ ಹಾದು ಹೋಗುವ ಕೆಲವೇ ಕೆಲವು ನಾಯಕರುಗಳು ಮಾತ್ರ. ಈ ಮಹಾನ್ ನಾಯಕರುಗಳ ಕರೆಗೆ ಕುಗ್ರಾಮದಿಂದ ಧ್ವನಿ ಮೊಳಗಿಸಿ, ಅವರ ಬೆಂಬಲಕ್ಕೆ ಟೊಂಕಕಟ್ಟಿ ನಿಂತ ಅದೇಷ್ಟೋ ಮಹಾನ್ ನಾಯಕರುಗಳ ಹೆಜ್ಜೆ ಗುರುತುಗಳು ಇಂದು ಮರೆಯಾಗಿರುವುದು ವಿಪರ್ಯಾಸವೇ ಸರಿ. ಕೆಂಪು ಮೂತಿಯರ ಆಳ್ವಿಕೆಗೆ ಲೆಕ್ಕವಿಲ್ಲದ ಅದೇಷ್ಟೋ ಭಾರತೀಯರು ಬಲಿಯಾಗಿದ್ದಾರೆ. ಅವರ ಹೋರಾಟ, ಸ್ವಾಭಿಮಾನ, ದಿಟ್ಟ ನಿರ್ಧಾರದಿಂದ ಇಟ್ಟ ಹೆಜ್ಜೆಗಳು ಇಂದು ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದುಕೊಂಡಿವೆ. ಬದುಕು ಸಾಗಿಸಲು ಹರಸಾಹಸ ಪಡುತ್ತಿದ್ದ ಕುಗ್ರಾಮಗಳಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿ, ಆಂಗ್ಲರಿಗೆ ನಡುಕ ಹುಟ್ಟಿಸುತ್ತಿದ್ದ ದೇಶಾಭಿಮಾನದ ಹೋರಾಟಗಾರರಲ್ಲಿ  ವಿಜಯಪುರ ಜಿಲ್ಲೆಯ ನಾಯಕರುಗಳೇನು ಕಡಿಮೆ ಇಲ್ಲ. ಅಂತಹವರ ಸಾಲಿನಲ್ಲಿ ಪ್ರಮುಖರಾದವರೇ ನಮ್ಮ ದೇಶಪ್ರೇಮಿ ತಮ್ಮಾಜಿ ಮಿರಜಕರ (Tammaji Miirajkar) ವರು.

ತಮ್ಮಾಜಿ ಮಿರಜಕರವರು ಮೂಲತಹ ದಿನ ವಿಜಯಪುರ ಜಿಲ್ಲೆಯ ತಾಳಿಕೋಟಿಯಲ್ಲಿ ವಾಸ ಮಾಡುತ್ತಿದ್ದ ದು ಬಡ ಕುಟುಂಬದಲ್ಲಿ ಜನಿಸಿದವರು. ಕಿತ್ತಿ ತಿನ್ನುವ ಬಡತನ ಇವರನ್ನು ಚಿಕ್ಕವನಿರುವಾಗಲೇ ಪಾತ್ರೆ ಅಂಗಡಿಯಲ್ಲಿ ಕೆಲಸಕ್ಕೆ ಸೇರುವಂತೆ ಮಾಡಿತು. ಸ್ವಾತಂತ್ರ್ಯ ಚಳುವಳಿಯ ನಿಮಿತ್ಯವಾಗಿ ಮಹಾತ್ಮ ಗಾಂಧೀಜಿಯವರು ಗಂಡು ಮೆಟ್ಟಿದ ನಾಡು ಹುಬ್ಬಳಿಗೆ ಬಂದಿರುತ್ತಾರೆ. ಆಗ ಹುಬ್ಬಳ್ಳಿಯ ಪಾತ್ರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ತಮ್ಮಾಜಿ ಗಾಂಧೀಜಿಯವರ ದರ್ಶನ ಪಡೆಯುತ್ತಾರೆ. ಮಹಾತ್ಮನು ಪಾಲಿಸುತ್ತಿದ್ದ ತತ್ವಗಳು, ಸದಾ ಶಾಂತಿ ಬಯಸುವ ಅವರ ನಡೆ, ಸ್ವಾತಂತ್ರ್ಯ ಬದುಕಿನ ಅವರ ಹೋರಾಟದ ಹಾದಿ, ಮಿಸೆ ಚಿಗುರದ ಯುವ ದೇಶಪ್ರೇಮಿ ತಮ್ಮಾಜಿಯ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿ, 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳುವಂತಾಯಿತು. ಸಮಾವೇಶದಲ್ಲಿ ಬಾಗವಹಿಸುವಿಕೆಯಿಂದ ತಮ್ಮಾಜಿಯವರ ಮನಸ್ಸು ಸ್ವಾತಂತ್ರ್ಯದ ಹೋರಾಟದತ್ತ ಇನ್ನಷ್ಟು ವಾಲತೊಡಗಿತು. ಹೇಗಾದರು ಮಾಡಿ ಆಂಗ್ಲರನ್ನು ಸದಬಡಿಯಲೇಬೇಕು. ಬ್ರಿಟಿಷರ ದಬ್ಬಾಳಿಕೆಗೆ ಕೊನೆ ಹಾಡಲೇಬೇಕು ಎಂದು ನಿರ್ಧರಿಸಿ ಸ್ನೇಹಿತರನ್ನು ಒಂದುಗೂಡಿಸಿ, ಹುಬ್ಬಳ್ಳಿಯ ಸುತ್ತಮುತ್ತ ಬೆಳೆದು ನಿಂತಿದ್ದ ಸಿಂದಿ ಮರಗಳನ್ನು ಕಡಿದು ಹಾಕಿ, ಪಿಕೆಟಿಂಗ್ ಠರಾವು ಓದಿ ಹೇಳಿ ಪೊಲೀಸರ ಅತಿಥಿಯಾದರು. ಚಿಕ್ಕ ವಯಸ್ಸಿನವರಾಗಿದ್ದ ಕಾರಣ ತಮ್ಮಾಜಿ ಸಂಜೆ ವೇಳೆಗೆ ಬಿಡುಗಡೆಗೊಂಡರು. ನಂತರ ಹುಬ್ಬಳ್ಳಿಯಲ್ಲಿ ಯಾವುದೇ ಸಭೆ, ಸಮಾರಂಭ ಮಾಡಲು ನಿರ್ಭಂದ ಹೇರಿದ ಬ್ರಿಟಿಷರ ಕಾನೂನನ್ನು ಉಲ್ಲಂಘಿಸಿ, ಸ್ನೇಹಿರೊಂದಿಗೆ ಗುಳ್ಳವ್ವನ ಕೆರೆಯವರೆಗೆ ಮೆರವಣಿಗೆ ಮಾಡಿ ಸಭೆ ನಡೆಸಿ, ಒಂದುವರೆ ತಿಂಗಳು ಜೈಲುವಾಸ ಅನುಭವಿಸಿದರು.

ಈ ಸುದ್ದಿಯನ್ನೂ ನೋಡಿ… ವಿಜಯಪುರದ ವೀರ ದೇಶಮುಖ

ತಮ್ಮಾಜಿ (Tammaji Miirajkar) ಹಾಗೂ ಹಾನಗಲ್ಲ ದೇಸಾಯಿ ಜತೆಗೂಡಿ ಕಲ್ಲತ್ತೆಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ತೆರಳಲು ಸ್ವದೇಶಿ ಉಪ್ಪನ್ನು ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಪೊಲೀಸರು ಇವರನ್ನು ಬಂಧಿಸಿ ಮೂರು ತಿಂಗಳುಗಳ ಕಾಲ ಸೆರೆವಾಸದಲ್ಲಿದ್ದರು. ನಂತರ ಹುಬ್ಬಳ್ಳಿ ಗಡಿದಾಡುವ ಹಾಗಿಲ್ಲ ಎನ್ನುವ ಕಠೀಣ ಶರತ್ತಿನೊಂದಿಗೆ ಬಿಡುಗಡೆಗೊಂಡು ಹುಬ್ಬಳ್ಳಿಗೆ ಬಂದರು. ಆದರೆ ಪೊಲೀಸರು ಇವರ ದಿನನಿತ್ಯದ ಚಟುವಟಿ ಕೆಗಳನ್ನು ಗಮನಿಸುತ್ತಾ ಕಾವಲು ಇಟ್ಟರು. ಅಕ್ಕನ ಮನೆಯಲ್ಲಿ ವಾಸ ಮಾಡುತ್ತಿದ್ದ ತಮ್ಮಾಜಿಯವರ ನಡೆಗೆ ಭಾವ ಮನೆಯಿಂದ ಹೊರಹಾಕಿದರು. ಆ ಸಂದರ್ಭದಲ್ಲಿ ತಾಳಿಕೋಟಿಯಲ್ಲಿ ವಾಸಿಸುತ್ತಿದ್ದ ತಮ್ಮಾಜಿಯವರ ತಂದೆ ಅಕಾಲಿಕವಾಗಿ ನಿಧನ ಹೊಂದುತ್ತಾರೆ. ತಂದೆಯ ಅಂತ್ಯಕ್ರಿಯೆಗೆ ತೆರಳಲು ಅವಕಾಶ ಕಲ್ಪಿಸುವಂತೆ ಕೋರಿ ಪೊಲೀಸರಿಗೆ ಮನವಿ ಮಾಡುತ್ತಾರೆ. ಸಿಕ್ಕ ಅವಕಾಶ ಬಳಸಿಕೊಳ್ಳಲು ಕಾತುರತೆಯಿಂದ ಕಾಯುತ್ತಿದ್ದ ಆಂಗ್ಲ ಅಧಿಕಾರಿಗಳು ತಮ್ಮಾಜಿಗೆ ನೀನು ಇನ್ನೊಮ್ಮೆ ಸ್ವಾತಂತ್ರ್ಯ ಸತ್ಯಾಗ್ರಹದಲ್ಲಿ ಬಾಗವಹಿಸುವುದಿಲ್ಲಾ ಎಂದು ವಚನ ಕೊಟ್ಟರೆ ಮಾತ್ರ ನಿನಗೆ ನಿನ್ನ ತಂದೆಯ ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸುತ್ತಾರೆ.

ಆಂಗ್ಲರ ಈ ಶರತ್ತಿಗೆ ದೇಶಪ್ರೇಮಿ ತಮ್ಮಾಜಿಯವರು (Tammaji Miirajkar) ನೀಡಿದ ಉತ್ತರ ಪ್ರತಿಯೊಬ್ಬ ಭಾರತೀಯನು ಎದೆಯುಬ್ಬಿಸುವಂತೆ ಮಾಡಿತ್ತು ಅದೆನೆಂದರೆ, ಬ್ರೀಟಿಷರೇ ನಾನು ಪ್ರಾಣ ಕೊಡುವೆ, ನಿಮ್ಮ ಈ ಕಠಿಣ ಶಿಕ್ಷೆಗೆ ನಾನು ಬೆದರುವುದಿಲ್ಲ, ನಾನು ನನ್ನ ತಂದೆಯ ಅಂತ್ಯ ಸಂಸ್ಕಾರಕ್ಕೆ ಹೋಗದಿದ್ದರೂ ಪರವಾಗಿಲ್ಲ, ಆದರೆ ಸತ್ಯಾಗ್ರಹದಲ್ಲಿ ಪಾಲ್ಗೋಳ್ಳುವುದಿಲ್ಲ ಎಂದು ಭಾಷೆಯನ್ನು ಮಾತ್ರ ಕೊಡಲಾರೆ ಎಂದು ಕೆಂಪು ಮೂತಿಯ ಕುನ್ನಿಗಳಿಗೆ ಮುಖಕ್ಕೆ ಹೊಡೆದಂತೆ ಉತ್ತರಿಸಿ ದೇಶಪ್ರೇಮ ಮೆರೆದರು. ನಂತರ ಪೊಲೀಸರ ನಿಯಮ ಉಲ್ಲಂಘಿಸಿ ತಾಳಿಕೋಟಿಗೆ ಬಂದರು. ಮತ್ತೆ ಶಿಕ್ಷೆಗೆ ಗುರಿಯಾಗಿದ್ದರಿಂದ, ಪೊಲೀಸರಿಗೆ ಕ್ಷಮೆ ಕಜೇಳುವಂತೆ ತಮ್ಮಾಜಿಯವರ ಸಂಬಂದಿಕರೆಲ್ಲರೂ ಒತ್ತಾಯಿಸಿದರು. ಸಂಬಂಧಿಗಳ ತ್ತಾಯಕ್ಕೆ ಮಣಿದು ಕ್ಷಮೆ ಕೋರಿದರೂ ತಮ್ಮಾಜಿಯವರನ್ನು ಒಂದು ವರ್ಷಗಳ ಕಾಲ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು.

ಅಷ್ಟೋತ್ತಿಗಾಗಲೇ ದೇಶಾದ್ಯಂತ ಸ್ವಾತಂತ್ರ್ಯ ಚಳುವಳಿಯ ಸ್ವರೂಪಗಳು ಚುರುಕುಗೊಂಡಿದ್ದವು. ತಾಳಿಕೋಟಿಯಲ್ಲಿನ ಕಾಂಗ್ರೆಸ್ ಕಮೀಟಿಯ ಹಲವಾರು ಸದಸ್ಯರೊಂದಿಗೆ ಜಯ ಘೋಷಣೆ ಮಾಡಿದ ಕಾರಣ ಮತ್ತೆ ಯರೋಡಾ, ಇಸಾಪೂರ ಜೈಲಿನಲ್ಲಿ ನೂರಾರು ಕಷ್ಟಗಳನ್ನು ಅನುಭವಿಸುತ್ತಾ ಸತತ ಎರಡು ವರ್ಷಗಳ ಕಾಲ ಸೆರೆವಾಸದಲ್ಲಿ ಬಂಧಿಯಾಗಿ ಬಿಡುಗಡೆಯಾದರು. ಆ ಸಮಯದಲ್ಲಿ ತಮ್ಮಾಜಿಯವರ ಕುಟುಂಬ ಬಡತನಕ್ಕೆ ನರಳಿ, ಉಪಜೀವನಕ್ಕಾಗಿ ಮುದ್ದೇಬಿಹಾಳ ಪಟ್ಟಣಕ್ಕೆ ಗೂಳೆ ಹೋದರು. ಕೊನೆಗೂ ತಮ್ಮಾಜಿಯವರ ಸ್ವಾತಂತ್ರ್ಯದ ಕನಸು ನನಸಾಯಿತು, ಭರತ ಭೂಮಿ 1947 ಆಗಷ್ಟ್ 15ರಂದು ಆಂಗ್ಲರಿಂದ ದಾಸ್ಯಮುಕ್ತಿ ಪಡೆಯಿತು.

ಜೀವನದುದ್ದಕ್ಕೂ ಹೋರಾಟ ನಡೆಸುತ್ತಾ ಜೀವನ ಸವೆಸಿದ್ದ ತಮ್ಮಾಜಿಯವರು ಕುಟುಂಬದೊಂದಿಗೆ ಮುದ್ದೇಬಿಹಾಳದಲ್ಲಿಯೇ ವಾಸಿಸತೊಡಗಿದರು. ಸಮಾಜ ಸೇವೆ ಗೈಯುತ್ತಾ ರಾಜ್ಯ ಖಾಧಿ ಗ್ರಾಮೋದ್ಯೋಗದ ಮಂಡಳಿಯ ರಾಜ್ಯ ಸದಸ್ಯರಾಗಿ, ತಾಲೂಕಾ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಾ ಜೀವನ ಕಳೆದರು. ಇವರ ಅವಿರತ ಸೇವೆ, ಸ್ವಾತಂತ್ರ್ಯದ ಹೋರಾಟವನ್ನು ಗುರುತಿಸಿ ಸರಕಾರ ಹಾಗೂ ಅನೇಕ ಸಂಘ, ಸಂಸ್ಥೆಯವರು ಸನ್ಮಾನ ನೆರವೇರಿಸಿ ಗೌರವ ಸಮರ್ಪಿಸಿದ್ದಾರೆ. ಇವರ ಹೋರಾಟ, ಜೀವನದ ಹಾದಿಯು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಪ್ರಸ್ತುತ ತಮ್ಮಾಜಿ ಮಿರಜಕರವರ ಕುಟುಂಬಸ್ಥರು ಮುದ್ದೇಬಿಹಾಳ ಪಟ್ಟಣದಲ್ಲಿ ವಾಸ ಮಾಡುತ್ತಾ ಸಮಾಜ ಸೇವೆಯಲ್ಲಿ ನಿರತರಾಗಿರುವುದು ಹಮ್ಮೆಯ ಸಂಗತಿ.

 ಶ್ರೀಪಾದ ಜಂಬಗಿ

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!