- Advertisement -Newspaper WordPress Theme
Exclusiveಶಿಕ್ಷಣ ಎಂದರೆ ಏನು..? ಅಂತಿಮ ಗುರಿ ಹೇಗಿರಬೇಕು. . .

ಶಿಕ್ಷಣ ಎಂದರೆ ಏನು..? ಅಂತಿಮ ಗುರಿ ಹೇಗಿರಬೇಕು. . .

(swami nirbhayananda saraswati) ಶಿಕ್ಷಣ ಎಂದರೆ ಏನು? ಈ ಶಿಕ್ಷಣದ ಅಂತಿಮ ಗುರಿ ಯಾವುದು? ಶಿಕ್ಷಣ ಎನ್ನುವ ಪ್ರಕ್ರಿಯೇಯಿಂದ ಪ್ರಯೋಜನವಾದರೂ ಏನು? ಯಾವ ಗುರಿಯನ್ನು ಶಿಕ್ಷಣ ಇಟ್ಟುಕೊಂಡಿದೆಯೋ ಅದು ಈಡೇರಲ್ಪಡುತ್ತಿದೆಯೋ? ಹಾಗಿದ್ದರೆ ಯಾವ ರೀತಿ ಈಡೇರಲ್ಪಡುತ್ತಿದೆ, ಇಲ್ಲವಾದಲ್ಲಿ ಏಕೆ ಈಡೇರಲ್ಪಡುತ್ತಿಲ್ಲ, ಹಾಗಾದರೆ ಪ್ರಸ್ತುತ ನಮ್ಮ ಪ್ರಯತ್ನಗಳು ಯಾವ ದಿಕ್ಕಿನಲ್ಲಿ ಸಾಗಬೇಕು? ಇವೆ ಮೊದಲಾದ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮತ್ತೆ ಮತ್ತೆ ಸುಳಿಯದಿದ್ದಲ್ಲಿ ಶಿಕ್ಷಣ ವ್ಯವಸ್ಥೆ ನಿಂತ ನೀರಾಗುತ್ತದೆ, ಇರುವ ಜಾದಲ್ಲೇ ಸ್ಥಗಿತಗೊಳ್ಳುತ್ತದೆ, ಪಾಚಿ ಕಟ್ಟಿ, ನಾತ ಹೊರಡಿಸಿ ಸ್ವಾಸ್ಥ್ಯವನ್ನು ಕೆಡಿಸುತ್ತದೆ.

ಸ್ವಲ್ಪ ಹೆಚ್ಚು ಕಡಿಮೆ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯೂ ಹಾಗೆಯೇ ಆಗಿದೆ ಅಂದರೆ, ಈ ದೇಶದ ಜನರಿಗೆ ಸರಿಯಾದ ತರಬೇತಿ ಸಿಗುತ್ತಿಲ್ಲ. ಲಕ್ಷಾಂತರ ಜನ ಶಿಕ್ಷಣ ಪಡೆದ ವ್ಯಕ್ತಿಗಳು ಇದ್ದಾರಲ್ಲ, ಅಂದರೆ ಅದಕ್ಕೆ ಉತ್ತರ ಇಷ್ಟೇ ಅವರು ಶಿಕ್ಷಿತರಲ್ಲ, ಅವರೆಲ್ಲ ಕೇವಲ ಓದು ಬರಹ ಬಲ್ಲವರು. ಒಂದು ಪುಸ್ತಕದಲ್ಲಿದ್ದ ಕೆಲವು ಪಾಠಗಳನ್ನು ನೆನಪಿನಲ್ಲಿಟ್ಟುಕೊಂಡು, ಪರೀಕ್ಷೆ ಕಾಲದಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಸರಿಯಾಗಿಯೇ ಉತ್ತರಿಸಿ, ಕೆಲವು ಅಂಕಗಳನ್ನು ಪಡೆದವರು. ಇಷ್ಟಕ್ಕೆ ತಾವು ಶಿಕ್ಷಕರೆಂದು ಭಾವಿಸಿದವರು ಎಂದರೆ ತಪ್ಪಾಗಲಾರದು.

ಇಂದಿನ ವಿದ್ಯಾವಂತ ವರ್ಗದಲ್ಲಿ ಕಾಣುವುದು ಎಂತಹವರನ್ನು ಎಂದರೆ, ಇವರು ಚರಿತ್ರೆಯನ್ನು ಓದಿ ಅಂಕ ಗಳಿಸಿದ್ದಾರೆ, ದೇಶದ ಹೆಗ್ಗಳಿಕೆ ಏನು? ದೇಶದ ದೌರ್ಭಲ್ಯ ಏನು? ಯಾವಾಗ ನಾವು ಮೆರೆದು, ಯಾವಾಗ ನಾವು ಬಿದ್ದೆವು ಎಂದು ತಿಳಿಯದವರು, ಗಾಂಧೀಜಿಯ ಪಾಠವನ್ನು ಚನ್ನಾಗಿ ಓದಿದವರು ಇವರು, ಆದರೆ ಈಡೀ ಜೀವನದಲ್ಲಿ ಅಪ್ರಾಮಾಣಿಕತೆ, ಅಸತ್ಯಗಳ ಆಶ್ರಯದಾತರಾಗಿ ಬದುಕಬೇಕು ಎಂಬ ಪ್ರತಿಜ್ಞೆಯನ್ನೇ ತೊಟ್ಟವರಂತೆ ಬದುಕಿತ್ತಿರುವವರು ಹೀಗೆಯೇ ಸಾಗುತ್ತದೆ ಇಂತಹವರುಗಳ ಪಟ್ಟಿ.(swami nirbhayananda saraswati)

ಒಟ್ಟಿನಲ್ಲಿ ತಮ್ಮ ವಿದ್ಯಾಭ್ಯಾಸ ಏತಕ್ಕಾಗಿ? ಶಿಕ್ಷಣ ಎಂದರೆ ಏನು? ಶಿಕ್ಷಣದ ಗುರಿ ಏನು? ಯಾವುದೇ ಪಠ್ಯಗಳನ್ನು ಓದುವುದರ ಉದ್ದೇಶವೇನು? ಇವುಗಳ ಬಗ್ಗೆ ಯೋಚನೆಯನ್ನೇ ಮಾಡದೇ ಹೇಗೋ ಎಲ್ಲರಿಗೂ ಆಗಿದ್ದು ನಮಗೂ ಆಗುತ್ತದೆಯಲ್ಲ ಎನ್ನುವ ಮನೋಭಾವ ದಿಂದ, ನಮ್ಮ ದೇಶದ ವಿದ್ಯಾರ್ಥಿಗಳ, ವಿದ್ಯಾವಂತರ ಜೀವನದಲ್ಲಿ ಅಮೂಲ್ಯವಾದ ಸಮಯ ವ್ಯರ್ಥವಾಗಿ ಹರಿದುಹೋಗುತ್ತಿದೆ.

ಇದನ್ನು ನೋಡಿದಾಗ ಅನಿಸುವುದೇನೆಂದರೆ, ಬೃಹತ್ತಾದ ಮೆರವಣಿಗೆಯೊಂದು ಸಾಗುತ್ತಿದೆ, ಕೋಟ್ಯಾಂತರ ಜನ ಪಾಲ್ಗೋಂಡಿದ್ದಾರೆ, ಕಹಳೆಗಳು, ರಣಭೇರಿ ನಿನಾದಗೈಯುತ್ತಿವೆ, ಎಲ್ಲೆಲ್ಲೂ ಸಂಭ್ರಮ, ಯಾರಿಗೂ ಯೋಚಿಸಲು ಪುರುಸೊತ್ತಿಲ್ಲ, ಯಾವುದರೆಡೆಗೂ ಗಮನ ಕೊಡಲು ಸಮಯವಿಲ್ಲ, ಎಲ್ಲಿಗೆ ಹೊರಟಿದ್ದೀರಿ ಎಂದು ಯಾರಾದರೂ ಅವರನ್ನು ಕೇಳಿದರೆ ಯಾರಿಗೂ ಗೊತ್ತಿಲ್ಲ. ಏಕೆ ಹೊರಟಿದ್ದೀರಿ ಎಂದರೆ, ತಮ್ಮ ಮುಂದಿನವರು ಹೊರಟಿದ್ದಾರೆ ನಾವು ಹೋರಟಿದ್ದೇವೆ ಎನ್ನುತ್ತಾರೆ. ಹೀಗೆ ಗುರಿಯಿಲ್ಲ, ಉದ್ದೇಶವಿಲ್ಲ ಎಂಬಂತಾಗಿದೆ ನಮ್ಮ ಇಂದಿನ  ಶಿಕ್ಷಣ ಪದ್ಧತಿ. 

ಭಾರತೀಯರು ಶಿಕ್ಷಣ ಎನ್ನುವ ಪದಕ್ಕೆ ಬಹಳ ವಿಶಾಲವಾದ ಅರ್ಥವನ್ನು ಕೊಟ್ಟಿದ್ದಾರೆ. ಅದನ್ನು ನಾವೆಲ್ಲರೂ ತಿಳಿಯಲೇಬೇಕು. ಭಾರತೀಯ ಜೀವನ ಸಂಹಿತೆಯಲ್ಲಿ ಸಾ ವಿದ್ಯೆ ಯಾ ವಿಮುಕ್ತಯೇ ಎನ್ನುವ ಸಾಲನ್ನು ನಾವು ನೋಡುತ್ತೇವೆ ಅಂದರೆ, ಯಾವುದು ಮನುಷ್ಯನನ್ನು ಅಸಹಾಯಕತೆಯಿಂದ, ಇತಿಮಿತಿಗಳಿಂದ ಪಾರು ಮಾಡುತ್ತೋ, ಎಂತಹ ಸಂದರ್ಭದಲ್ಲೇ ಆಗಲಿ ಪರಿಸ್ಥಿತಿಯ ಕೈಗೊಂಬೆಯಾಗದಂತೆ ಪರಿಸ್ಥಿತಿಯ ಪ್ರಭುವನ್ನಾಗಿಸುತ್ತೋ ಅದುವೆ ವಿದ್ಯೆ.

ಇದೇ ಅರ್ಥದಲ್ಲಿಯೇ ಗ್ರೀಕ್ ಚಿಂತಕ ಅರಿಸ್ಟಾಟಲ್ ಹೇಳುತ್ತಾನೆ ಕಷ್ಟಗಳಲ್ಲಿ,  ಕ್ಲಿಷ್ಟಕರ ಸನ್ನಿವೇಶಗಳಲ್ಲಿ, ಹತಾಶಯ ಸಂದರ್ಭದಲ್ಲಿ, ನಮಗೆ ಆಸರೆ, ಆಧಾರ, ಭರವಸೆ ಇವೆ ಶಿಕ್ಷಣದ ಪ್ರಮುಖ ಅಂಶಗಳು ಎಂದು. ಹಾಗೆಯೇ ಶಾಂತಿ, ಸಮೃದ್ಧಿ, ಸುಖಗಳ ಕಾಲದಲ್ಲಿ ಮನುಷ್ಯನ ಸೌಂದರ್ಯವನ್ನು ಹೆಚ್ಚಿಸುವ, ಮೆರಗನ್ನು ಕೊಡುವ ವರಪ್ರಸಾದಂತೆ ಕಂಗೊಳಿಸುವುದೇ ಶಿಕ್ಷಣ. ಶಿಕ್ಷಣ ಎನ್ನುವ ಪದಕ್ಕೆ ಇಂಗ್ಲಿಷ್ ನಲ್ಲಿ ಎಜುಕೇಷನ್ ಎನ್ನುತ್ತೇವೆ.(swami nirbhayananda saraswati)

ಈ ಎಜುಕೇಷನ್ ಲ್ಯಾಟಿನ್ ಭಾಷೆಯ ಎಡುಕೋ, ಎಡುಕೇ ಎನ್ನುವ ಪದದಿಂದ ಹುಟ್ಟಿ ಬಂದಿದೆ. ಲ್ಯಾಟಿನ್‌ನಲ್ಲಿ ಎಡುಕೋ, ಎಡುಕೇರ್ ಎಂದರೆ ಹೊರಕ್ಕೆ ತೆಗೆ, ಆಚೆಗೆ ತೆಗೆ ಎಂದು ಅರ್ಥವಾಗಿದೆ. ಭಾರತದ ಮೂಲ “ವಿದ್ಯಾ” ಮತ್ತು “ಇಂಗ್ಲಿಷ್”ನ ಎಜುಕೇಷನ್ ಎನ್ನುವ ಪದದ ಅರ್ಥ ವಿಕ್ಸಿಸಿದರೇ ನಮಗೆ ಶಿಕ್ಷಣ ಎಂದರೆ ಏನು, ಅದರ ಉದ್ದೇಶ ಏನು ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ.

ಈ ಸುದ್ದಿಯನ್ನೂ ನೋಡಿ… ಸಾಧಿಸಬಲ್ಲೇ ಎನ್ನುವವರಿಗೆ ಚನ್ನಣ್ಣವರ ಸ್ಪೂರ್ತಿದಾಯಕ ಮಾತುಗಳು

ಶಿಕ್ಷಣದ ಬಗ್ಗೆ ಪರಮಾದ್ಬುತವಾದ ವಿಚಾರವನ್ನು ಕೊಟ್ಟ ಸ್ವಾಮಿ ವಿವೇಕಾನಂದರು ಹೇಳುತ್ತಾರೆ ಎಜುಕೇಷನ್ ಇಸ್ ದಿ ಮ್ಯಾನುಪೆಷ್ಟೇಷನ್ ಆಪ್ ರ‍್ಪೇಕ್ಷನ್ ದ್ಯಾಟ್ ಇಸ್ ಆಲ್‌ರೆಡಿ ಇನ್ ಮ್ಯಾನ್ ಅಂದರೆ, “ಈಗಾಗಲೇ ನಮ್ಮಲ್ಲಿರುವ ಪರಿಪೂರ್ಣತೆಯನ್ನು ನಮ್ಮ ವ್ಯಕ್ತಿತ್ವದಲ್ಲಿ, ಜೀವನದಲ್ಲಿ ಬದುಕಿನ ಪ್ರತಿ ಹೆಜ್ಜೆಯಲ್ಲೂ ವ್ಯಕ್ತಗೊಳಿಸುವುದಕ್ಕೆ ಯಾವ ತರಬೇತಿ, ಯಾವ ಚೌಕಟ್ಟು, ಯಾವ ವ್ಯವಸ್ಥೆ ಸಹಾಯವನ್ನು ಮಾಡುತ್ತದೆಯೋ ಅದೇ ಶಿಕ್ಷಣ”.

ಹೀಗೆ ನಮ್ಮೊಳಗೆ ಅಪಾರವಾದ ಶಕ್ತಿ , ಅದ್ಬುತ ಸಾಮರ್ಥ್ಯ ಇರುವುದರಿಂದಲೇ ಎಂತಹ ಕ್ಲಿಷ್ಟಕರ, ಹತಾಶ ಸನ್ನಿವೇಶಗಳಲ್ಲೂ ನಾವು ಎದೆಗುಂದಬೇಕಾದ ಅವಶ್ಯಕತೆಯಿಲ್ಲ, ಬೆರೆಯವರ ಮೇಲೆ ಅವಲಂಬಿತರಾಗಬವೇಕಿಲ್ಲ ಇದನ್ನ ನಾವು ತಿಳಿದಿದ್ದರೇ ಸಣ್ಣ ರಾಷ್ಟ್ರದ ಗುಲಾಮಗಿರಿಯಲ್ಲಿ ನಾವು ಬದುಕುತ್ತಿರಲಿಲ್ಲ. ಇಡೀ ಜೀವನವನ್ನು ಸರ್ವಾಂಗಸುಂದರವಾಗಿಸುವ, ಯಶೋಗಾಥೆಯನ್ನಾಗಿಸುವ, ಮುಂದಿನ ತಲೆಮಾರಿಗಳು ನಮ್ಮ ಕಡೆಗೆ ಬೆರಗುಗಣ್ಣಿನಿಂದ ನೋಡುವಂತೆ ಮಾಡುವ ಸಾಮರ್ಥ್ಯ ಈ ಶಿಕ್ಷಣ ಎನ್ನುವ ಪ್ರಕ್ರಿಯೆಗೆ ಇದೆ. (swami nirbhayananda saraswati)

ಏಕೆಂದರೆ ಪ್ರಕೃತಿ ಮಾತೆ ನಮ್ಮಗೆ ಹಾಗೆ ಸೃಷ್ಠಿಸಿದ್ದಾಳೆ. ಯಾವುದೇ ಮಾತೆಯೂ ಕೂಡಾ ತಮ್ಮ ಮಕ್ಕಳ ಮುಂದೆ ತನ್ನ ಸೋಲು ಬಯಸುತ್ತಾಳೆ. ತನ್ನ ಮಕ್ಕಳು ತನ್ನನ್ನೂ ಮೀರಿ ಬೆಳೆಯಲಿ ಎಂದು ಆಶಿಸುತ್ತಾಳೆ. ಆದ್ದರಿಂದ ನಮ್ಮ ತಾಯಿಯಾದ ಪ್ರಕೃತಿಯು ಕೂಡಾ ನಮ್ಮ ಮುಂದೆ ಸೋಲು ಬಯಸುತ್ತಾಳೆ. ಉದಾಹರಣೆಯೆಂದರೆ, ರಾತ್ರಿಯಲ್ಲಿ ಕತ್ತಲಾಗುವುದು ಪ್ರಕೃತಿಯ ನಿಯಮ, ಆದರೆ ಪ್ರಕೃತಿಯ ಶಿಶುವಾದ ಮಾನವ ಇಂದು ತನ್ನ ಬುದ್ಧಿ, ವಿದ್ಯಾಬಲದಿಂದ ವಿದ್ಯುಚ್ಚಕ್ತಿಯನ್ನು ಕಂಡು ಹಿಡಿದು ರಾತ್ರಿಯನ್ನು ಹಗಲಾಗಿಸಿರುವುದೇ ಸಾಕ್ಷಿ.

ಹಾಗೆಯೇ ಇಂದು ಇತಿಹಾಸ ನಿರ್ಮಿಸಿದ ಕೆಲವು ವ್ಯಕ್ತಿಗಳನ್ನು ನೋಡಿದಾಗ, ಅವರ ಸಾಧನೆಗಳನ್ನು ವಿಕ್ಷಿಸಿದಾಗ ದಿಗ್ಭ್ರಮೆಗೊಳ್ಳುತ್ತೇವೆ. ದುರಂತವೇನೆಂದರೆ, ಪ್ರತಿಯೊಬ್ಬರು ಈ ಶಕ್ತಿಯನ್ನು ಪಡೆದಿದ್ದರೂ ಆ ಲಕ್ಷಣಗಳನ್ನು ತೋರದಿರುವುದು. ಆ ಲಕ್ಷಣಗಳು ಅವರಲ್ಲಿ ಕಾಣಬರುವುದಿಲ್ಲವಲ್ಲ ಇದಕ್ಕೆ ಪ್ರಮುಖ ಕಾರಣ ಅವರ ಶಿಕ್ಷಣ ಪರಿಪಕ್ವವಾಗಿಲ್ಲದಿರುವುದು, ಅವರ ಶಿಕ್ಷಣ ಪದ್ಧತಿ ದೋಷಗಳಿಂದ, ಕೊರತೆಗಳಿಂದ ಕೂಡಿ ವೈಫಲ್ಯದಿಂದ ಬಳಲುತ್ತಿರುವುದು.

ಅವರಿಗೆ ಅವರೊಳಗಿನ ಶಕ್ತಿಯ ಪರಿಚಯವೇ ಇಲ್ಲದೆ ಸಾಮಾನ್ಯರಂತೆ ಬದುಕುತ್ತಿರುವುದು ಎಂದರೆ ತಪ್ಪಾಗಲಾರದು. ಪ್ರಾಚಿನ ಭಾರತದ ಶಿಕ್ಷಣ ಪದ್ಧತಿಯ ಮೊದಲ ಪಾಠವೇ ಮನುಷ್ಯನ ಶಕ್ತಿಯನ್ನು ಅವನಿಗೆ ಪರಿಚಯಿಸುವುದು. ಅದರ ಮೂಲಕ ತನ್ನಲ್ಲಿ ಅಪಾರ ಆತ್ಮ ವಿಶ್ವಾಸವನ್ನು ತುಂಬಿ, ಎಷ್ಟು ಸಾಧನೆಗೈದರೂ ತೃಪ್ತನಾಗದೇ ಮತ್ತಷ್ಟು, ಮಗದಷ್ಟು ಸಾಧಿಸಬೇಕು ಎಂಬ ಹಂಬಲ ತೀವೃ ಆಸೆ ಆಕಾಂಕ್ಷೆಗಳನ್ನು ಅವನಲ್ಲಿ ತುಂಬುವುದು ಆಗಿತ್ತು. ಇಂದಿನ ವಿದ್ಯಾರ್ಥಿಗಳು ಇವನೆಲ್ಲವನ್ನೂ ಗಮನಿಸಬೇಕು. (swami nirbhayananda saraswati)

ಅಂದಿನ ಶಿಕ್ಷಕ ತನ್ನಲ್ಲಿರುವ ಪೂರ್ಣ ಸಾಮರ್ಥ್ಯದ ಚಿತ್ರ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ, ತಾನೇ ಜೀವನದಲ್ಲಿ ಅದನ್ನ ಸಾಧಿಸಿ, ವಿದ್ಯಾರ್ಥಿಗಳಿಗೆಲ್ಲ ಅದ್ಬುತ ಜೀವಂತ ಸೆಲೆಯಾಗಿದ್ದ. ಅದ್ಬುತ ಶಕ್ತಿಯಾಗಿದ್ದ. ಭಾರತೀಯರ ಶಿಕ್ಷಣ ಪದ್ದತಿಯನ್ನು ಅಂದು ಗ್ರೀಸ್ ದೇಶವು ಕೂಡಾ ಅಳವಡಿಸಿ ಕೊಂಡಿತ್ತು ಎಂಬುದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ಇಂದು ಪಾಶ್ಚಾತ್ಯರು ಏನು ಹೇಳುತ್ತಿದ್ದಾರೋ ಅದು ಭಾರತದ ಹಳೆಯ ಮೌಲ್ಯ. ಪ್ರತಿ ವಿಜ್ಞಾನ ಹುಟ್ಟಿದ್ದು ಭಾರತದಲ್ಲಿ ಬೆರೆ ದೇಶದವರು ಅದನ್ನು ಬೆಳೆಸಿದರು ಮಾತ್ರ. ಇದು ಭಾರತ ಜಗತ್ತಿಗೆ ನೀಡಿದ ಶಿಕ್ಷಣದ ಕೊಡುಗೆ.

ಈ ಸುದ್ದಿಯನ್ನೂ ನೋಡಿ… ಯುವಕರಿಗಾಗಿ ರಾಷ್ಟ್ರನುಡಿಗಳು

1835 ರಲ್ಲಿ ಲಾರ್ಡ ಮೆಕಾಲೆ ಭಾರತದ ಶಿಕ್ಷಣ ಮಸೂಧೆಯನ್ನು ರಚಿಸುವ ಮುನ್ನ, ಭಾರತವನ್ನ ಒಮ್ಮೆ ಸಂದರ್ಶಿಸಿ ಈ ದೇಶದಲ್ಲಿ ಒಬ್ಬನೂ ಬಡವನಿಲ್ಲ. ಒಬ್ಬನೂ ಕಳ್ಳತನ, ದರೋಡೆ ಮಾಡುವುದಿಲ್ಲ. ದೇಶದ ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಸಂಚರಿಸಿ ನೋಡಿದ್ದೇನೆ, ಇಲ್ಲಿಯ ಸಂಸ್ಕೃತಿ ಅತ್ಯಂತ ಶ್ರೇಷ್ಠ, ಇದೇ ಈ ದೇಶದ ಶಕ್ತಿ, ಈ ಸಂಸ್ಕೃತಿಯನ್ನು ಮುರಿಯದೇ ಕೇವಲ ಕತ್ತಿಯಿಂದ ಇವರನ್ನು ಗೆಲ್ಲುವುದು ಕಷ್ಟ, ಕತ್ತಿಯಿಂದ ಗೆದ್ದರೂ ಅವರ ಸಂಸ್ಕೃತಿ, ವಿದ್ಯೆ ನಮ್ಮನ್ನು ಹೀರಿಕೊಂಡುಬಿಡುತ್ತದೆ ಎಂದು ಹೇಳುತ್ತಾನೆ.

ಇದರೆಲ್ಲದರ ಹಿಂದೆ ಕಾರ್ಯ ನಿರ್ವಹಿಸಿದ್ದು ಪ್ರಾಚಿನ ಭಾರತದ ಶಿಕ್ಷಣ ಪದ್ಧತಿ. ಅದು ಮಾಡಿದ ಮೊದಲ ಕೆಲಸ ಭಾರತೀಯರಿಗೆ ತಮ್ಮ ಶಕ್ತಿಯ ಪರಿಚಯ ಮಾಡಿಸಿದ್ದು, ತನ್ಮೂಲಕ ಅವರಲ್ಲಿ ಆತ್ಮ ವಿಶ್ವಾಸ ಮೂಡುವಂತೆ ಮಾಡಿದ್ದು ಮಿಕ್ಕಿದ್ದೆಲ್ಲಾ ಸಹಜವಾಗಿಯೇ ಆಯಿತು.

ಇಂದಿನ ಶಿಕ್ಷಣ ಪದ್ಧತಿ ಭಾರತೀಯರ ಆತ್ಮ ವಿಶ್ವಾಸವನ್ನೂ ನುಚ್ಚುನೂರು ಮಾಡಿದೆ. ಗೆಲ್ಲುವ ಮತ್ತು ಗೆದ್ದು ಬರುವ ಪ್ರವೃತ್ತಿಯನ್ನೇ ಅವರಲ್ಲಿ ಕೊಂದು ಹಾಕಿದೆ. ನಾವು ದುರ್ಬಲರೋ? ಸಭಲರೋ? ಎಂದು ತಿಳಿಯಬೇಕಾದರೆ ನಮ್ಮ ರಚನೆಯನ್ನೇ ನಾವು ಅರಿಯಬೇಕು. ನಾವು ಯಾವ ವಸ್ತುವಿನಿಂದ ಆಗಿದ್ದೇವೆ, ಏಕೆಂದರೆ ನಾವು ಯಾವ ಮೂಲ ವಸ್ತುವಿನಿಂದ ಆಗಿದ್ದೇವೆ ಆ ವಸ್ತುವಿನ ಲಕ್ಷಣಗಳೇ ನಮ್ಮಲ್ಲಿ ಇರುತ್ತದೆ ಎಂಬುದನ್ನು ಆಧುನಿಕ ವಿಜ್ಞಾನ ಸ್ಪಷ್ಟವಾಗಿ ತಿಳಿಸುತ್ತದೆ.

ಹಾಗಾದರೆ ನಾವು ಯಾವ ಮೂಲ ವಸ್ತುವಿನಿಂದ ಆಗಿದ್ದೇವೆ, ಹೇಗೆ ಬೌತಶಾಸ್ತ್ರದಲ್ಲಿ, ರಸಾಯನ ಶಾಸ್ತ್ರದಲ್ಲಿ ಒಂದೊಂದು ವಿಷಯವನ್ನು ಪ್ರಶ್ನಿಸಿ, ಕೆದಕಿ ಯಾವ ಪೂರ್ವಾಗ್ರಹವೂ ಇಲ್ಲದೇ ಕೇವಲ ಸತ್ಯವನ್ನು ತಿಳಿಯುವ ವಸ್ತು ನಿಷ್ಠಾಂತರರಿಂದ ವಿಷಯಗಳನ್ನು ಅರಿಯುತ್ತೇವೆಯೋ ಇಲ್ಲೂ ಅದನ್ನೇ ಅನುಸರಿಸಿದರೆ ನಮಗೆ ತಿಳಿಯುವುದು ಇಂದಿನ ಬಯಾಲಜಿ ಅಥವಾ ಜೀವ ವಿಜ್ಞಾನ ತಿಳಿಸುವ ಶರೀರಕ್ಕಿಂತ ನಮ್ಮ ವ್ಯಕ್ತಿತ್ವದಲ್ಲಿ ಪ್ರಧಾನವಾದ ಅಂಶ ಮನಸ್ಸು. ಮತ್ತು ಈ ಮನಸ್ಸೆ ಮೂಲ ವಸ್ತುವಲ್ಲ ಏಕೆಂದರೆ, ಯಾವ ಯಾವ ವಸ್ತು ಬದಲಾಯಿಸುತ್ತದೆಯೋ ಅವೆಲ್ಲಾ ಸಂಯುಕ್ತ ವಸ್ತು ಆಗಿಸುತ್ತದೆ. ಮತ್ತು ಸಂಯುಕ್ತ ವಸ್ತುಗಳೆಲ್ಲಾ ಸ್ವತಂತ್ರವಲ್ಲ, ಅದು ಇನ್ಯಾವುದೋ ಬಾಹ್ಯ ವಸ್ತುವಿನ ಪ್ರಭಾವಕ್ಕೆ ಒಳಪಟ್ಟಿರುತ್ತದೆ.

ಇದೇ ತರ್ಕವನ್ನು ನಾವು ಮುಂದುವರೆಸಿದರೆ, ಯಾವ ಮೂಲ ವಸ್ತುವಿನಿಂದ ನಾವು ಮಾಡಲ್ಪಟ್ಟಿದ್ದೇವೆಯೋ ಅದು ಯಾವ ಪ್ರಭುತ್ವಕ್ಕೂ ಒಳಗಾಗಲಾರದ್ದು, ಬದಲಾವಣೆಯಿಲ್ಲದ್ದೂ, ನಿರಪೇಕ್ಷವಾದದ್ದೂ ಆ ಕಾರಣಕ್ಕಾಗಿಯೇ ಮಿತಿಗಳನ್ನ ಇಲ್ಲವಾಗಿಸಿದ್ದು. ಈ ಆಧಾರದ ಮೇಲೆ ಯಾವ ವಸ್ತುವಿನಿಂದ ಮಾಡಲ್ಪಟ್ಟಿದ್ದೇವೆಯೋ ಅದು ಜಡವಲ್ಲ ಚೈತನ್ಯ, ಅದು ಸಾಪೇಕ್ಷವಲ್ಲ ನಿರಪೇಕ್ಷ. ಹಾಗಾದರೆ ನಾವು ಹೇಗೆ ದುರ್ಬಲರು ? ಇದನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯಕ.

ಸ್ವಾತ್ರ್ಯಕ್ಕಿಂತ ಮುಂಚೆ ಹಲವಾರು ಜನ ಭಾರತಿಯರನ್ನ, ಭಾರತೀಯತೆಯ ಮೆದುಳುಗಳನ್ನ ಪ್ರೇರೇಪಿಸಿದಂತಹ ಸ್ವಾಮಿ ವಿವೇಕಾನಂದರ ಶಿಕ್ಷಣದ ಚಿಂತನೆಗಳು ಇಂದು ನಮಗೆ ಅತ್ಯಂತ ಪ್ರಸ್ತುತವಾಗಿವೆ. ಮತ್ತೊಮ್ಮೆ ನಾವು ಶಕ್ತಿಯ ಪಾಠವನ್ನು ಪಡೆಯಬೇಕೆಂದರೆ, ವಿವೇಕಾನಂದರ ಚಿಂತನೆಗಳಿಗಿಂತಲೂ ಉತ್ತಮ ಮೂಲ ಯಾವುದು ಇಲ್ಲ. ಇವರ ಸಿಂಹವಾಣಿ ನಮ್ಮ ಶಿಕ್ಷಣದ ಆಧಾರ ತತ್ವವಾಗಬೇಕು.

ಇಲ್ಲಿಂದಲೇ ನಮ್ಮ ಶಿಕ್ಷಣ ಪ್ರಕ್ರಿಯೆ ಪ್ರಾರಂಭವಾಗಬೇಕು. ಇಲ್ಲಿಂದ ಪ್ರಾರಂಭವಾದ ಆಶಿಕ್ಷಣ ಪ್ರಕ್ರಿಯೆ ಇಡೀ ವಿಶ್ವವನ್ನೇ, ಇಡೀ ಪ್ರಕೃತಿಯನ್ನೇ ಗೆಲ್ಲುವ ಶಕ್ತಿ ಸಾಮರ್ಥ್ಯವನ್ನು ನಮಗೆ ಕೊಡುವರೆಗೂ ಅದು ನಿಲ್ಲಬಾರದು. ಒಂದು ಕಾಲದಲ್ಲಿ ಭಾರತದ ಶಿಕ್ಷಣ ಪದ್ಧತಿ ಹಾಗೆಯೇ ಇತ್ತು. ಅದರ ಉತ್ತಮವಾದ ಅಂಶಗಳನ್ನು ಇಂದಿಗೂ ಕೂಡಾ ನಾವು ಅಳವಡಿಸಿಕೊಳ್ಳಲೇಬೇಕು. ಅದು ಇಂದು ಬೇರೆಂದಿಗಿಂತಲೂ ಹೆಚ್ಚು ಅನಿವಾರ್ಯ.

 ಸ್ವಾಮಿ ನಿರ್ಭಯಾನಂದ ಸರಸ್ವತಿ

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!