- Advertisement -Newspaper WordPress Theme
Exclusiveಯಾರಿಗೆ ಬಂತು? ಎಲ್ಲಿಗೆ ಬಂತು? ನಲವತ್ತೇಳರ ಸ್ವಾತಂತ್ರ್ಯ

ಯಾರಿಗೆ ಬಂತು? ಎಲ್ಲಿಗೆ ಬಂತು? ನಲವತ್ತೇಳರ ಸ್ವಾತಂತ್ರ್ಯ

ಅದ್ಯಾಕೊ ಮನಸ್ಸು ವಿಚಲಿತವಾಗುತ್ತಿದೆ. ಆ ಹಾಡು ಮತ್ತೆ ಮತ್ತೆ ಬೆಂಬಿಡದೇ ಕಾಡುತ್ತಿದೆ. ಎಪತ್ತೆರಡನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ದೇಶ ತೇಲುತ್ತಿದೆ, ಇಡೀ ಭಾರತ ಚಲೇಜಾವ್ ಚಳುವಳಿ ನೆನೆಯುತ್ತಿದೆ. ಆದರೆ ನನಗೆ ಮಾತ್ರ ಆ ಕವಿ ಗೀಚಿದ ಸಾಲುಗಳು ಕನವರಿಸುವಂತೆ ಮಾಡುತ್ತಿವೆ. ಅದರಲ್ಲಿನ ಪ್ರಶ್ನೆಗಳಿಗೆ ಉತ್ತರ ಹುಡುಕುವಂತೆ ಪ್ರೇರೇಪಿಸುತ್ತಿವೆ. ಆದರೆ ಮೂಡಿದ ಪ್ರಶ್ನೆಗೆ ಉತ್ತರ ಹುಡಕಲು ಸಾಧ್ಯವಾಗದೇ ಪ್ರಶ್ನೆಗಳಿಗೆ ಮರು ಪ್ರಶ್ನೆ ಹಾಕುತ್ತ ಸಾಗುತ್ತಿದ್ದೇನೆ. ನನಗೆ ಮೂಡಿದ ಪ್ರಶ್ನೆಗಳು, ನನಗೆ ಕಾಡುತ್ತಿರುವ ಆ ಗೀತೆಯನ್ನು ನಿಮ್ಮೆದುರು ಬಿಚ್ಚಿಡುತ್ತಿದ್ದೇನೆ. ಯಾವುದಾ ಗೀತೆ? ಏನು ಆ ಪ್ರಶ್ನೆಗಳು? ಎಂದು ಹುಡುಕುವದರೊಳಗೆ ಮತ್ತೋಂದು ವರ್ಷದ ಸ್ವಾತಂತ್ರೋತ್ಸವಕ್ಕೆ ಕಾಲಿಟ್ಟಿರುತ್ತೇವೆ. ಮತ್ತದೇ ಪ್ರಶ್ನೆ. ಮತ್ತದೇ ಕನವರಿಕೆ. ನನಗೆ ಕಾಡುವ ಹಾಡು ಅಂದರೆ……! ಅದೇ ಬಂಡಾಯ ಸಾಹಿತಿ ಸಿದ್ಧಲಿಂಗಯ್ಯನವರು ರಚಿಸಿದ ಗೀತೆ.
“ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಟಾಟಾಬೀರ್ಲಾ ಜೋಬಿಗೆ ಬಂತು
ಜನಗಳು ತಿನ್ನುವ ಬಾಯಿಗೆ ಬಂತು
ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಬಡವನ ಮನೆಗೆ ಬರಲಿಲ್ಲ
ಬೆಳಕಿನ ಕಿರಣಾ ತರಲಿಲ್ಲ”
ಈ ಗೀತೆಯಲ್ಲಿ ಮೂಡಿ ಬಂದ ಸಾಲುಗಳು ಸತ್ಯವನ್ನು ನಮ್ಮ ಮುಖಕ್ಕೆ ರಾಚುವಂತೆ ಹೇಳುತ್ತಿದೆ. ಆ ಗೀತೆಯಲ್ಲಿರುವಂತೆ ನಮ್ಮ ದೇಶದ ಪರಸ್ಥಿತಿ ಹಾಗೆ ಮುಂದುವರೆದಿರುವುದು ವಿಶಾಧನೀಯವಾಗಿದೆ. ಹೌದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯಾ? ನಾವು ಸ್ವತಂತ್ರರಾಗಿದ್ದಿವಾ? ಬ್ರೀಟೀಷರ ದಾಸ್ಯದಿಂದ ಸಂಪೂರ್ಣ ಮುಕ್ತರಾಗಿದ್ದಿವಾ? ನಮ್ಮತನವನ್ನು ನಾವು ಕಂಡುಕೊಂಡಿದ್ದಿವಾ? ನೆಮ್ಮದಿಯ ಜೀವನ ಸಾಗಿಸುತ್ತಿದ್ದೀವಾ? ಅಂದುಕೊಂಡಿದ್ದು ಸಾಧಿಸಿದ್ದಿವಾ? ಜಗತ್ತಿನೆದುರು ನಾವೇನೆಂದು ಗುರುತಿಸಿಕೊಂಡಿದ್ದಿವಾ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ನಾವು ಸಿದ್ಧರಿದ್ದಿವಾ? ಇದಕ್ಕೆ ಸಧ್ಯದ ದೇಶದ ಸ್ಥಿತಿಯೇ ಉತ್ತರಿಸುತ್ತದೆ.

ಗಾಂಧೀ ಹೇಳಿದ ಮಾತು ಸತ್ಯವಾಯಿತಾ?
ಅಂದು ಮಹಾತ್ಮಾಗಾಂಧಿ ಸ್ವಾತಂತ್ರ್ಯದ ಕುರಿತು ಉಲ್ಲೇಖಿಸುತ್ತಾ ಹೇಳಿದ ಮಾತಿಂದು ನೆನಪಿಗೆ ಬರುತ್ತಿದೆ. “ಯಾವಾಗ ಮಧ್ಯರಾತ್ರಿ ಸ್ತ್ರೀಯೊಬ್ಬಳು ಒಬ್ಬಂಟಿ ಯಾಗಿ ಅಂಜಿಕೆ ಅಳುಕಿಲ್ಲದೆ ನಡುರಸ್ತೆಯಲ್ಲಿ ನಡೆದು ಹೋಗುತ್ತಾಳೋ ಆ ದಿನವೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಂತೆ” ಎಂದು ಹೇಳಿದರು. ಅದರೇ ಇಂದು ಮಧ್ಯರಾತ್ರಿಯಲ್ಲ ಹಾಡು ಹಗಲೇ ಸ್ತ್ರೀಯು ಸ್ವತಂತ್ರ್ಯವಾಗಿ ಓಡಾಡುವ ಹಾಗಿಲ್ಲ. ಕಾಲೇಜಿಗೆ ಹೋದ ಅಕ್ಕ, ಟ್ಯೂಷನ್‍ಗೆ ಹೋದ ಮಗಳು, ಮಾರ್ಕೇಟ್‍ಗೆ ಹೋದ ಹೆಂಡತಿ, ದೇವಸ್ಥಾನಕ್ಕೆ ಹೋದ ತಾಯಿ ಮನೆಗೆ ಬರಲು ಸ್ವಲ್ಪ ವಿಳಂಬವಾದರೆ ಸಾಕು ಹೃದಯವು ಢವಗುಟ್ಟತ್ತದೆ. ಎಲ್ಲಿ ಏನಾಯಿತು ಎಂದು ಮನಸ್ಸು ಕೆಟ್ಟ ಆಲೋಚನೆಗಳ ಮೊರೆ ಹೋಗುತ್ತದೆ. ಕಂಡ ದೇವರಿಗೆ ಕೈಮುಗಿಯಲು ಪ್ರೇರೆಪಿಸುತ್ತದೆ. ಅಂದರೆ ಆ ಪರಸ್ಥಿತಿ ಏನಿರಬಹುದೆಂದು ಊಹಿಸಿರ ಬೇಕು. ಅಂದಮೇಲೆ ಮಹಿಳೆಯರ ಮೇಲೆ ಹಾಡು ಹಗಲೆ ಅತ್ಯಾಚಾರ ನಡೆಯುತ್ತಿರುವಾಗ ಹೆದರಿಕೆ ಇಂದ ಅವಳು ಜೀವನ ನಡೆಸುತ್ತಿರುವಾಗ ನನ್ನಲ್ಲಿ ಮೂಡಿದ ಪ್ರಶ್ನೆ ಸರಿಯಾಗೇ ಇದೆ. ಅದೇ ನಾವು ಸ್ವತಂತ್ರ್ಯರಾಗಿದ್ದಿವಾ? ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ನಿತ್ಯವು ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ನೋಡಿದರೆ ಭಾರತದ ಮುಂದಿನ ಭವಿಷ್ಯದ ಕುರಿತು ಹೆದರಿಕೆಯಾಗುತ್ತದೆ. ವೇದಗಳ ಕಾಲದಿಂದ ಹಿಡಿದು ಇಲ್ಲಿಯವರೆಗೂ “ಯತ್ರ ನಾರ್ಯಸ್ತು ಪುಜ್ಯಂತೆ ರಮಂತೆ ತತ್ರ ದೇವತಃ” ಎನ್ನುವ ಉಕ್ತಿಯನ್ನು ಕೇಳಿ ಬೆಳೆದ ಭಾರತೀಯ ಸಮಾಜ ಇಂದು ಅದನ್ನು ಮರೆತು ಮೃಗೀಯ ಧೋರಣೆಯನ್ನು ಅನುಸರಿಸುತ್ತಿರುವುದು ಯಾವ ತರಹದ ಸ್ವಾತಂತ್ರ್ಯ ಸ್ವಾಮಿ?

ದಬ್ಬಾಳಿಕೆಯಿಂದ ಮುಕ್ತರಾಗಿದ್ದಿವಾ?
ಆ ದಿನಗಳಲ್ಲಿ ನಮ್ಮನ್ನು ಆಳುತ್ತಿದ್ದ ಬ್ರಿಟೀಷರು ನಮ್ಮನ್ನು ಗುಲಾಮರಂತೆ ಕಾಣುತ್ತಿದ್ದರು. ನಮ್ಮ ದೇಶದ ಅನ್ನವ ತಿಂದು ನಮಗೆ ಬೊಗಳುವ ಕುನ್ನಿ ಗಳಾಗಿದ್ದರು. ಹೀಗಾಗಿ ನಮ್ಮಲ್ಲಿನ ದೌರ್ಭಲ್ಯವನ್ನು ಅರಿತಿದ್ದ ಅವರುಗಳು ಅಕ್ಷರಶಃ ನಮ್ಮ ಮೇಲೆ ಹಿಂದೆಂದು ಕಂಡರಿಯದಂತ ದೌರ್ಜನ್ಯ ಎಸಗುತ್ತಿದ್ದರು. ತಮ್ಮ ಬೂಟು ಕಾಲಿನಡಿಯಲ್ಲಿ ಹಾಕಿ ನಮ್ಮನ್ನು ತುಳಿಯುತ್ತಿದ್ದರು. ಇಂದು ಆ ದಬ್ಬಳಿಕೆಯ ದಾಸ್ಯದಿಂದ ನಾವು ಮುಕ್ತಿ ಹೊಂದಿದ್ದಿವಾ? ವಿಚಿತ್ರ ಹೇಗಿದೆ ನೋಡಿ ಈ ಪ್ರಶ್ನೆಗೆ ಉತ್ತರಿಸಬೇಕಾದರೆ ನಮ್ಮನ್ನು ನಾವೆ ಒಂದು ಬಾರಿ ವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. ಅಂದು ಬ್ರೀಟೀಷರ ಬೂಟುಕಾಲುಗಳು ನಮ್ಮನ್ನು ತುಳಿಯುತ್ತಿದ್ದವು. ಆದರೆ ಈಗ ಅದೇ ಬ್ರೀಟಿಷರ ಬೂಟು ಧರಿಸಿರುವ ಭಾರತೀಯ ಬ್ರಿಟೀಷರು ನಮ್ಮನ್ನು ತುಳಿಯುತ್ತಿದ್ದಾರೆ. ಕಾಲುಗಳು ಮಾತ್ರ ನಮ್ಮವರು ಆದರೆ ಬೂಟುಗಳು ಮಾತ್ರ ಬ್ರಟೀಷರು. ಅದು ಹೇಗೆ ಎಂಬ ಪ್ರಶ್ನೆಯೇ? ಯಾಕೆ….? ಸಾಕಾಗಿಲ್ಲವೇ ತಮಗೆ ರಾಜಕಾರಣಿಗಳು ಕೊಡುತ್ತಿರುವ ತೊಂದರೆ. ಓಟು ನೀಡಿದ ಜನಗಳನ್ನೆ ದಾಳ ಮಾಡಿಕೊಂಡು ರಾಜಕೀಯದ ಚದುರಂಗದ ಆಟದಲ್ಲಿ ತೊಡಗಿರುವುದನ್ನು ಇನ್ನು ಬಿಡಿಸಿ ಹೇಳಬೇಕೆ.
“ಗೊಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ಹಣವಿದ್ದವರು ಕೈಸನ್ನೆ ಮಾಡಿದರೆ
ಕತ್ತಲೆಯಲ್ಲಿ ಬೆತ್ತಲಾಯಿತು
ಯಾರು ಕಾಣದ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ”

ವಿದೇಶಿ ಗುಲಾಮಗಿರಿಯಿಂದ ಹೊರಬಂದಿದ್ದಿವಾ?
ಈ ಪ್ರಶ್ನೆಗೆ ಉತ್ತರ ಇಲ್ಲ….ಇಲ್ಲ….ಇಲ್ಲ ಮತ್ತು ಇಲ್ಲ. ಕಾರಣ ಇದರ ಹೊರತು ಬೇರೆಯ ಉತ್ತರವೇ ಇಲ್ಲ. ಯಾಕಂದರೆ ಅಂದು ಸ್ವಯಂ ಪ್ರೇರಿತರಾಗಿ ತಕ್ಕಡಿ ಹಿಡಿದು ವ್ಯಾಪಾರಕ್ಕಾಗಿ ಭಾತಕ್ಕೆ ಬಂದ ಒಂದು ಈಸ್ಟ್ ಇಂಡಿಯಾ ಕಂಪನಿ ಸುಮಾರು ನಮ್ಮನ್ನು ಇನ್ನೂರು ವರ್ಷಗಳ ಕಾಲ ಆಳ್ವಿಕೆ ಮಾಡಿದವು. ನಮ್ಮಲ್ಲಿ ಕಚ್ಚಾವಸ್ತುಗಳನ್ನು ತೆಗೆದುಕೊಂಡು ಹೋಗಿ ಸಿದ್ಧವಸ್ತುವಾಗಿ ಮಾರ್ಪಡಿಸಿ ನವiಗೆ ಮಾರಿ ನಮ್ಮಿಂದ ಲಾಭ ಪಡೆದುಕೊಂಡು ನಮ್ಮವರನ್ನು ಅವರ ಗುಲಾಮರನ್ನಾಗಿ ಮಾಡಿಕೊಂಡರು. ಇಂದು ಅದರಿಂದ ಹೊರ ಬಂದಿದ್ದಿವಾ? ಊಹೂಂ……! ಇಲ್ಲ. ಅಂದವರು ಸ್ವಯಂಪ್ರೇರಿತರಾಗಿ ಭಾರತಕ್ಕೆ ಬಂದಿದ್ದರು. ಆದರೆ ಇಂದು ನಾವುಗಳು ಜಾಗತೀಕರಣ, ಉದಾರೀಕರಣ ಹಾಗೂ ಕೈಗಾರೀಕರಣದ ಹೆಸರಿನಲ್ಲಿ ರತ್ನಗಂಬಳಿ ಹಾಸಿ ನಮ್ಮನ್ನಾಳುವುದಕ್ಕೆ ಸ್ವಾಗತಿಸುತ್ತ ಸ್ವಯಂ ದಾಸ್ಯತ್ವದೆಡೆಗೆ ಮುಖ ಮಾಡಿದ್ದೇವೆ. ಹೀಗಾಗಿ ಸಾವಿರಾರು ವಿದೇಶಿ ಕಂಪನಿಗಳು ಇಂದು ನಮ್ಮ ಮೇಲೆ ತಮ್ಮ ಪ್ರಭುತ್ವವನ್ನು ಸಾಧಿಸಿವೆ. ನಮಗೆ ಅವರ ವಸ್ತುಗಳು ಸಿಗದೆ ಇದ್ದರೆ ಬದುಕುವುದೇ ಇಲ್ಲ ಎನ್ನು ಮಟ್ಟಕ್ಕೆ ಅಡಿಯಾಳಾಗಿರುವುದು ವಿಪರ್ಯಾಸವಲ್ಲದೆ ಮತ್ತೇನು?
“ಅರಿಶಿಣ ನುಂಗಿತು ಫೆರ್ ಅಂಡ್ ಲೌಲಿ
ಕುಂಕುಮ ಕಳಚಿತು ಸ್ಟಿಕರ್ ಚುಕ್ಕಿ
ಎಳೆನೀರಮ್ಮನ ಎಳೆದು ಕೊಂದಿತು
ಪೆಪ್ಸಿ ಕೋಲಾ ಕೆಕೆ ಹಾಕಿತು
ಫರಂಗಿಯವರು ಮತ್ತೆ ಬಂದರೆ
ನಾವು ನೀವು ಮಾಯವೋ”

ಮೌಢ್ಯತೆಯಿಂದ ಮುಕ್ತರಾಗಿದ್ದೀವಾ?
ವಿಚಿತ್ರ ಹೇಗಿದೆ ಎಂದರೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷ ಗತಿಸಿದರು ನಾವು ಇನ್ನು ಸ್ವತಃ ಯೋಚಿಸುವ ಬುದ್ದಿಯನ್ನು ಪಡೆದಿಲ್ಲ. ರಾಜ್ಯವನ್ನಾಳುವುದಕ್ಕಾಗಿ ಬಂದವರು ಸಹ ಮೌಢ್ಯತೆಯಿಂದ ಹೊರ ಬಂದಿಲ್ಲ. ಅದಕ್ಕೆ ಬದಲಾಗಿ ಆ ಮೌಢ್ಯತೆಯ ಕೂಪದೊಳಗೆ ಬಿದ್ದು ಒದ್ದಾಡುತ್ತಿರುವಾಗ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ ಎಂದು ಯಾವ ಮೂಲದಿಂದ ಹೇಳಬೇಕು ನೀವೇ ಹೇಳಿ. ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾರಿನ ಮೇಲೆ ಕಾಗೆ ಕೂತಿತು ಎಂದು ಕಾರನ್ನೇ ಬದಲಾಯಿಸಿದರು. ಒಬ್ಬ ರಾಜ್ಯದ ಮುಖ್ಯಮಂತ್ರಿ ಇದನ್ನೆಲ್ಲ ನಂಬುತ್ತಾರೆಂದರೆ ನೀವೆ ಹೇಳಿ ನಮ್ಮ ಯೋಚನಾ ಮಟ್ಟ ಎಲ್ಲಿ ಬಂದು ತಲುಪಿದೆ ಎಂದು.

ನಮ್ಮವರ ರಕ್ಷಣೆ ನಾವೇ ಮಾಡುತ್ತಿರುವೆವಾ?
ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶ ನಮ್ಮ ರಾಜ್ಯ ರಕ್ಷಣೆಗಾಗಿ ನಮ್ಮ ಜನರ ಏಳಿಗೆಗಾಗಿ ದುಡಿಯುತ್ತಿದ್ದ ನಾವುಗಳು ಇಂದು ಅಂದರೆ ಸ್ವಾತಂತ್ರ್ಯ ಸಿಕ್ಕ ಮೇಲೆ ಆ ಕಾರ್ಯವನ್ನು ಮಾಡುತ್ತಿದ್ದೇವಾ? ಖಂಡಿತಾ ಇಲ್ಲ. ಕಬ್ಬಿಣವನ್ನು ಮಣಿಸುವುದಕ್ಕೆ ಕಬ್ಬಿಣವನ್ನು ಬಳಸುವ ಹಾಗೆ ನಮ್ಮವರ ವಿರುದ್ಧ ನಾವೇ ಲಾಠಿ ಎತ್ತುತ್ತಿದ್ದೇವೆ. ನಾವೆಲ್ಲರು ಭಾರತಾಂಬೆಯ ಮಕ್ಕಳು ಭಾಷೆ, ವೇಷ, ಜಾತಿ ಏನೇ ಬೇರೆಯಾದರು ದೇಶ ಮಾತ್ರ ಒಂದೇ ಎಂದು ಬಡಾಯಿಕೊಚ್ಚುವ ನಾವುಗಳು ನದಿ ನೀರು ಹಂಚಿಕೆ, ಗಡಿ ಪ್ರದೇಶಗಳ ಹಂಚಿಕೆ, ಭಾಷಾವಾರು ಪ್ರಾಂಥಗಳ ಹಂಚಿಕೆ ಎಂದು ನಮ್ಮನ್ನು ನಾವೇ ಶೋಷಣೆ ಮಾಡಿಕೊಳ್ಳು ತ್ತಿರುವುದನ್ನು ನೋಡಿದರೇ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಚನ್ನಾಗಿದ್ದೆವೇನೋ ಎನ್ನಿಸುತ್ತದೆ. ನೀರು ಕೇಳಿದವರಿಗೆ ಲಾಠಿ ರುಚಿ ತೋರಿಸುವ ನಾವುಗಳು ನಮ್ಮ ಅಂತ್ಯಕ್ಕೆ ನಾವೇ ಮುನ್ನುಡಿ ಬರೆದುಕೊಳ್ಳುತ್ತಿದ್ದೆವಾ?
“ಪೊಲೀಸರ ಬೂಟಿಗೆ ಬಂತು
ಮಾಲಿಕರಾ ಚಾಟಿಗೆ ಬಂತು
ಬಂದೂಕಿನ ಗುಂಡಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ”

ಮೂಡನಂಬಿಕೆಯಿಂದ ಹೊರಬಂದಿದ್ದೇವಾ?
ಅಂದು ಗಂಡ ಸತ್ತರೆ ಹೆಂಡತಿಯನ್ನು ಗಂಡನ ಉರಿಯುವ ಚಿತೆಯಲ್ಲಿ ನೂಕಿ ಸಹಗಮನ ಎನ್ನುವ ಹೆಸರಿನಿಂದ ಅನ್ಯಾಯ ಮಾಡುತ್ತಿದ್ದೇವು. ಅದನ್ನು ಹೋಗಲಾಡಿಸು ಬ್ರಿಟೀಷರು ಸಹಾಯ ಮಾಡಿದರು. ಆದರೇ ಇಂದು ಅವರು ಹೋದ ಮೇಲು ಇನ್ನು ಹತ್ತು ಹಲವು ಅನಿಷ್ಠ ಆಚರಣೆಗಳನ್ನು ಅನುಸರಿ ಸುತ್ತಿರುವ ನಮಗೆ ಮೂಡುವ ಪ್ರಶ್ನೆ ಎಂದರೇ ಆಗಲೂ ಹೀಗೆ ಇತ್ತು ಈಗಲೂ ಹೀಗೆ ಇದೆ ಅಂದಮೇಲೆ ಎಲ್ಲಿಂದ ಬಂತು ಸ್ವಾತಂತ್ರ್ಯ ಎಂದು. ಕಾರಣ ಇನ್ನೂ ಬ್ರಾಹ್ಮಣರು ಉಂಡು ಬಿಸಾಡಿದ ಎಲೆಗಳ ಮೇಲೆ ಇತರರು ಬಿದ್ದು ಹೊರಳಾಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿರುವ ನಾವುಗಳು ಇನ್ನು ಮೌಢ್ಯತೆಯ ಅನಿಷ್ಠ ಆಚರಣೆಗಳ ದಾಸರಾಗುತ್ತದ್ದೇವೆ. ಅಂದ ಮೇಲೆ ಯಾವ ರೂಪದ ಸ್ವಾತಂತ್ರ್ಯವನ್ನು ನಾವು ಪಡೆದುಕೊಂಡಿದ್ದೇವೆ ಪ್ರಭುವೇ..?

ಧರ್ಮದ ಹೆಸರಿನಲ್ಲಿ ಧಬ್ಬಾಳಿಕೆ ನಿಂತಿದೆಯಾ?
ಆ ದಿನ ಸ್ವತಂತ್ರ್ಯ ಹೋರಾಟದಲ್ಲಿ ಒಂದು ಧರ್ಮದವರಿಗೆ ಭಾರತ ಮುಖ್ಯವಾಗಿತ್ತು, ಒಂದು ಧರ್ಮದವರಿಗೆ ಪಾಕಿಸ್ತಾನ ಬೇಕಿತ್ತು. ಅಂದು ಆರಂಭ ವಾಗಿದ್ದ ಈ ಧರ್ಮದ ದಬ್ಬಾಳಿಕೆ ಇಂದು ನಿಂತಿದೆಯಾ. ಪೂರ್ಣವಾಗಿ ನಿಂತಿದೆ ಎಂದರೆ ಅಂದೇ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂತೆ. ಆದರೇ ನಿಂತಿಲ್ಲ ನಿಲ್ಲುವುದೂ ಇಲ್ಲ. ಕಾರಣ ಭಾರತದ ಅನ್ನವನುಂಡು ಅನ್ಯ ದೇಶದವರಿಗಾಗಿ ಘೋಷಣೆ ಕೂಗುವವರಿಗೆ ಭಾರತದಲ್ಲಿ ಬರವೇನಿಲ್ಲ ಬಿಡಿ. ಅಂದು ದೇಶ ಒಡೆಯಲು ಹುನ್ನಾರ ನಡೆದಿತ್ತು ಇಂದು ಕಾಶ್ಮೀರ ಪಡೆಯಲು ಹುನ್ನಾರ ನಡೆದಿದೆ. ಅಂದು ಅದು ಧರ್ಮದ ಅಮಲೇರಿ ದೇಶ ಒಡೆದರು ಇಂದು ನಮ್ಮ ನಮ್ಮಲ್ಲೇ ಇದ್ದು ನಮ್ಮ ನಮ್ಮವರೇ ಧರ್ಮದ ಹೆಸರಲಿ ಕಿತ್ತಾಡುವುದದನ್ನು ನೋಡಿದರೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ನಿಮಗನ್ನಿಸುತ್ತದೆಯೇ?
ಯಾವದೇ ದೇಶ ಸಂಪೂರ್ಣವಾಗಿ ಸ್ವಾತಂತ್ರ್ಯವನ್ನು ಪಡೆದಿತ್ತೆಂದರೇ ಅಲ್ಲಿ ಯಾವುದೇ ನೋವು, ಹಿಂಸೆ ಅನ್ಯಾಯಗಳು ಇರಬಾರದು. ಇಡೀ ದೇಶದಲ್ಲಿ ಬರೀ ಒಂದೇ ಮಾತು ಕೇಳುತ್ತಿರಬೇಕು. ಅದು ದೇಶದ ಪ್ರಗತಿ, ಪ್ರಜೆಗಳ ಸದ್ಗತಿ. ಆದರೇ ಸ್ವತಂತ್ರ್ಯ ಭಾರತದಲ್ಲಿ ಅವರೆಡು ಪದಗಳ ಹೊರತು ಎಲ್ಲವು ಕಾಣಿಸುತ್ತದೆ ಎಂದರೇ ಭಾರತಕ್ಕೆ ಎಲ್ಲಿಂದ ಸ್ವಾತಂತ್ರ್ಯವಿದೆ ಎಂದು ತಿಳಿಯಬೇಕು ಹೇಳಿ. ಸ್ವತಂತ್ರ್ಯದ ನಂತರವಾದರು ಸಮಾನತೆ ತಂದುಕೊಟ್ಟಿತಾ? ಊಹೂಂ…..ಅದು ಇಲ್ಲ. ಹೀಗಾಗಿ ಮತ್ತೇ ಮೂಡುವ ಪ್ರಶ್ನೆ ಎಂದರೇ ಯಾರಿಗೆ ಬಂತು? ಎಲ್ಲಿಗೆ ಬಂತು? ನಲವ್ತೇಳರ ಸ್ವಾತಂತ್ರ್ಯ.
“ಮಂದಿರ ಮಸೀದಿ ಗದ್ದಲದಲ್ಲಿ
ದೇಶಪ್ರೇಮವ ತಿಪ್ಪೆಗೆಚೆಲ್ಲಿ
ಉಪ್ಪರಿಗೆಯಲಿ ಕೂಡಲು ಹೊರಟು
ದೇಶವ ತಿಪ್ಪೆ ಮಾಡಿದರು”

ದಲಿತರ ದೌರ್ಜನ್ಯ ನಿಂತಿದೆಯೇ?
ಆ ದಿನಗಳಲ್ಲಿ ಪರತಂತ್ರ್ಯದ ಜೊತೆಗೆ ಅಸ್ಪøಶ್ಯತೆ, ಜಾತಿಯ ಜಂಜಡ ನಮ್ಮ ದೇಶವನ್ನು ಕಿತ್ತು ತಿನ್ನುತ್ತಿದ್ದವು. ಅದಕ್ಕಾಗೀಯೇ ಬಹಳಷ್ಟು ಜನ ಈ ಸಮಾಜ ವನ್ನು ಒಗ್ಗೂಡಿಸಲು ಹಲವು ರೀತಿಯಲ್ಲಿ ಹೋರಾಟ ಮಾಡಿದರು. ಸ್ವತಂತ್ರ್ಯ ಬಂದ ನಂತರ ಈ ಸ್ಥಿತಿ ಬದಲಾಗಬಹುದು ಎಂದು ಅಂದುಕೊಂಡ ಜನರಿಗೆ ಅದು ಸಾಧ್ಯವಿಲ್ಲದ ಮಾತು ಎಂಬುದರ ಅರಿವಾಗಿದೆ. ಆಗಲೇ ಸ್ವಾತಂತ್ರ್ಯ ಪಡೆದು 71 ವರ್ಷ ಗತಿಸಿದವು. ಆದರೇ…. ಇನ್ನೂ ದಲಿತರ ಮೇಲಿನ ದಬ್ಬಾಳಿಕೆ ನಿಂತಿಲ್ಲ. ಜಾತಿಯತೆಯ ಕಮಟು ವಾಸನೇ ಭಾರತೀಯರ ಮನಸ್ಸಿನಿಂದ ಸೂಸುತ್ತಿರುವುದು ಕಡಿಮೇಯಾಗಿಲ್ಲ. ಅಂದ ಮೇಲೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೇ?

ಜನರು ರಾಜಕೀಯದ ಧಾಳವಾಗುವುದು ತಪ್ಪಿದೆಯಾ?
ಅಂದು ಕೂಡ ಭಾರತವನ್ನಾಳುವ ಉದ್ದೇಶಕ್ಕಾಗಿಯೇ ದೇಶಭಕ್ತರ ಸೋಗು ಹಾಕಿಕೊಂಡು ಕೆಲಸ ಸಾಧಿಸಿಕೊಂಡವರ ಸಂಖ್ಯೇಗೇನು ಕೊರತೆ ಇಲ್ಲ. ಅದ ರಿಂದ ದೇಶವನ್ನೇ ಒಡೆಯಲು ಸಿದ್ದರಾದವರು ಉಂಟು. ತನ್ನ ಮೆಚ್ಚಿನ ಶಿಷ್ಯನನ್ನು ಉನ್ನತ ಸ್ಥಾನಕ್ಕೇರಿಸುವ ಮಹದಾಶೆಯಿಂದ ದೇಶಕ್ಕೆ ಬೆಂಕಿ ಇಟ್ಟ ರಾಜಕಾರಣಿಗಳು ಉಂಟು. ಬುದ್ದಿವಂತರನ್ನು ಮುದ್ದೇ ಮಾಡಿ, ಶತಮೂರ್ಖರಿಗೆ ಪಟ್ಟಕಟ್ಟಿದ ಮಹಾನ್ ನೇತಾರರೂ ಇಲ್ಲೇನೂ ಕಮ್ಮಿ ಇರಲಿಲ್ಲ. ಆದರೆ ಅವರ ಶನಿ ಸಂತಾನ ಇಂದೀಗೂ ಮುಂದುವರೆದಿದ್ದು ದೇಶಕ್ಕೆ ಮಾರಣಾಂತಿಕ ಖಾಯಿಲೆ ತರುತ್ತಲಿದೆ. ಅವರು ಹಾಕಿ ಕೊಟ್ಟ ಹೊಲಸು ದಾರಿಯಲ್ಲಿ ನಡೆಯುತ್ತುರುವ ವಂಶ ಪಾರಂಪರ್ಯದ ಜನ ಇಂದೀಗೂ ದೇಶದ ಹಿತಕ್ಕಿಂತ ಸ್ವ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಸ್ವತಂತ್ರ್ಯ ಸಿಕ್ಕ ಮೇಲೆ ದೇಶ ಕಾಯುವ ಸೈನಿಕರ ಶವ ಪೆಟ್ಟಿಗೆಯಲ್ಲೂ ಹಗರಣ ಮಾಡಿದ ಈ ಜನರ ಪೀಳಿಗೆಯ ಕೊಡುಗೆ ಎನ್ನುವಂತೆ ರಾಜ್ಯ ರಾಜ್ಯಗಳಲ್ಲಿ ಹುಟ್ಟಿಕೊಂಡಿರುವ ಶನಿ ಸಂತಾನಗಳು ಅನ್ನದಾತನಿಗೂ ವಿಷ ಉಣಿಸುತ್ತಿವೆ. ಇನ್ನೂ ಸಾಮಾನ್ಯರನ್ನು ಕಾಲ್ಕಸದಂತೆ ತುಳಿಯುತ್ತಿರುವಾಗ ಎಲ್ಲಿದೇ ಸ್ವಾಮಿ ಸ್ವಾತಂತ್ರ್ಯ ಯಾರಿಗಾಗಿ ಇದೇ ಈ ಸ್ವಾತಂತ್ರ್ಯ.
“ಪಾರ್ಲಿಮೆಂಟಿ ಖುರ್ಚಿಯ ಮೇಲೆ
ವರ್ಷಗಟ್ಟಲೇ ಚರ್ಚೆ ಕೂತು
ಬಡವರ ಬೆವರು ರಕ್ತವ ಕುಡಿದು
ಏಳಲೇ ಇಲ್ಲ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ”

ಮುಗಿಸುವ ಮುನ್ನ…
ಹೀಗೇ ಕೇಳುತ್ತಾ ಹೋದರೆ ಪ್ರಶ್ನೆಗಳೇ ಮುಗಿಯುವುದಿಲ್ಲ. ಹುಡುಕುತ್ತ ಹೊರಟರೇ ತಪ್ಪುಗಳಿಗೆ ಕೊನೆ ಸಿಗುವುದಿಲ್ಲ. ಅಗೆಯುತ್ತ ಹೊರಟರೆ ಅನ್ಯಾಯಗಳಿಗೆ ಅಂತ್ಯವೇ ಕಾಣುವುದಿಲ್ಲ. ಒಟ್ಟಿನಲ್ಲಿ ನನ್ನಲ್ಲಿ ಮೂಡಿದ ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಎಂಬ ಪ್ರಶ್ನೆಗೆ ಉತ್ತರ ದೊರೆಯು ವುದಿಲ್ಲ. ಕಾರಣ ದಾಸದಲ್ಲಿ ಇದ್ದು ಅದಕ್ಕೆ ಒಗ್ಗಿ ಹೋಗಿರುವ ಭಾರತೀಯರು. ಬ್ರೀಟೀಷರು ನಮ್ಮನ್ನು ಬಿಟ್ಟು ಹೋದರು ಅವರ ಆಚಾರ ವಿಚಾರ, ನಡೆ ನುಡಿಗೆ ಅವರ ಸಂಸ್ಕøತಿಗೆ ದಾಸರಾಗಿದ್ದೇವೆ. ನಮ್ಮನ್ನಾಳಿದ ಅವರು, ಆಳ್ವಿಕೆ ಎಂದರೇನು ಶೋಷಿಸುವುದು ಹೇಗೆ ಎಂಬುದನ್ನು ಅಚ್ಚುಕಟ್ಟಾಗಿ ತಿಳಿಸಿ ಕೊಟ್ಟಿದ್ದಾರೆ.

ಒಡೆದು ಆಳುವುದು ಹೇಗೆ: ನಮ್ಮನ್ನು ನಾವೇ ತುಳಿದು ಆಳುವುದು ಹೇಗೆ ಎಂಬುದನ್ನು ನಮಗೆ ತೋರಿಸಿಕೊಟ್ಟಿದ್ದಾರೆ. ತಮ್ಮ ಬದುಕು ಕಟ್ಟಿಕೊಳ್ಳಲು ಇನ್ನೊಬ್ಬರ ಬದುಕನ್ನು ಹೇಗೆ ಬುನಾದಿ ಮಾಡಿಕೊಳ್ಳಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ. ನಾವುಗಳು ಹೋದರು ಸಹ ನಮ್ಮ ಆಡಳಿತ ಹಾಗೆ ಇರಲಿ. ನಾವುಗಳು ನಿಮ್ಮ ರೂಪದಲ್ಲಿ ನೀವಾಡುವ ಆಟದಲ್ಲಿ, ತೋರುವ ಧರ್ಪದಲ್ಲಿ ಮಾಡುವ ಧಬ್ಬಾಳಿಕೆಯಲ್ಲಿ ಇದ್ದೇ ಇರುತ್ತೇವೆ ಎನ್ನುವಂತೆ ತಮ್ಮ ಸಿದ್ಧಾಂತಗಳನ್ನು ಇಲ್ಲೇ ಬಿಟ್ಟು ಹೋಗಿದ್ದಾರೆ. ಇದನ್ನು ಅಮಲೇರುವಷ್ಟು ಹೀರಿರುವ ಭಾರತೀಯರು, ಭಾರತೀಯ ಬ್ರೀಟೀಷರಾಗಿ ನಮ್ಮವರನ್ನೇ ಶೋಷಿಸುತ್ತಿದ್ದಾರೆ. ಇದಕ್ಕೆಲ್ಲಿಯ ಅಂತ್ಯಾ. ಮುಂದಿನ ಸ್ವಾತಂತ್ರೋತ್ಸವದ ಹೊತ್ತಿಗೆ ಈಗಲೇ ಮತ್ತೋಂದು ಪ್ರಶ್ನೇ ಕೇಳುತ್ತಿದ್ದೇನೆ ಸಾಧ್ಯವಾದರೇ ಉತ್ತರ ಕಂಡುಕೊಳ್ಳಿ. ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?
– ಮಂಜುನಾಥ .ಮ. ಜುನಗೊಂಡ
ಉಪನ್ಯಾಸಕರು ರಾಜ್ಯಶಾಸ್ತ್ರ ಹಾಗೂ ಪತ್ರಿಕೋದ್ಯಮ ವಿಭಾಗ

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!