ಪ್ರಪಂಚವೇ ಹೆಮ್ಮೆ ಪಡುವ ಸಮಾನತೆ ಸಾರುವ ಜಾತಿ, ಧರ್ಮ, ಬೇಧಗಳನ್ನು ಮೆಟ್ಟಿನಿಂತ ನಮ್ಮ ರಾಷ್ಟ್ರ ಧ್ವಜವು ನಮ್ಮ ಜಿಲ್ಲೆಯಲ್ಲಿ ತಯಾರಾಗುತ್ತೆ ಎಂದು ಕೋಟೆಯ ನಾಡಿನ ಜನರು (Tulasigeri) ಎದೆ ತಟ್ಟಿ ಹೇಳುವ ವಿಷಯವಾಗಿದೆ. ಪುಣ್ಯಕ್ಷೇತ್ರ ತುಳಸಿಗೇರಿಯಲ್ಲಿ ಕಳೆದ 16 ವರ್ಷಗಳಿಂದ ತ್ರಿವರ್ಣ ಬಾವುಟದ ಬಟ್ಟೆ ತಯಾರಾಗುತ್ತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
1981/82 ರಲ್ಲಿ ಬರಗಾಲ ವಿಶೇಷ ಯೋಜನೆಯಡಿಯಲ್ಲಿ ಆಗಿನ ಅಖಂಡ ಬಿಜಾಪುರ ಈಗಿನ ಬಾಗಲಕೋಟ ಜಿಲ್ಲೆಯ ಬದಾಮಿ, ಬೀಳಗಿ ತಾಲೂಕುಗಳಲ್ಲಿ ಸುಮಾರು 32 ಗ್ರಾಮಗಳಲ್ಲಿ ನಿರುದ್ಯೋಗ ನಿವಾರಣೆ ಸಲುವಾಗಿ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡುವ ಸಲುವಾಗಿ ಖಾದಿ ಗ್ರಾಮೋದ್ಯೋಗ ಕೇಂದ್ರಗಳನ್ನು ಸ್ಥಾಪಿಸಿದರು. ಅದರಲ್ಲಿ ಸುಮಾರು 1500 ಜನರು ನೂಲುವುದು, ನೇಯುವುದು ಇತರೆ ಕೆಲಸ ತೊಡಗಿಕೊಂಡರು.
ಗದ್ದನಕೇರಿ ವಿಭಾಗ ವನ್ನು ಮಾಡಿ ಅದರಲ್ಲಿ ಬೆಲೂರು ವಿಭಾಗ, ಕೆರೂರ ವಿಭಾಗ, ಸಿದ್ದಾಪೂರ ವಿಭಾಗಗಳನ್ನಾಗಿ 4 ವಿಭಾಗಗಳನ್ನು ಮಾಡಿ ಇವೆಲ್ಲವೂ ಹುಬ್ಬಳ್ಳಿ ಮತ್ತು ಗದ್ದನಕೇರಿ ಕೇಂದ್ರಗಳ ಅಡಿಯಲ್ಲಿ ಖಾದಿ ಕೆಲಸ ಮಾಡಲು ಪ್ರಾರಂಬಿಸಿದವು. 2002 ರಲ್ಲಿ ಸಂಸ್ಥೆ ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ತಯಾರಿಸಲು ಅನುಮತಿ ಸಿಕ್ಕಿತು. ಅಲ್ಲಿಂದ ನಮ್ಮ ತುಳಸಿಗೇರಿ (Tulasigeri), ಸೀಮಿಕೇರಿ, ಜಾಲಿಹಾಳ ಕೇಂದ್ರಗಳಲ್ಲಿ ಧ್ವಜ ಬಟ್ಟೆ ನೇಯಿಸಲು ಅದಕ್ಕೆ ಬೇಕಾದ ಹುರಿನೂಲ ತಯಾರಿ ಕೆಲಸ ಆರಂಭಿಸಲಾಯಿತು.

ರಾಷ್ಟ್ರಧ್ವಜದ ಬಟ್ಟೆಗೆ ಉತ್ತಮ ಗುಣಮಟ್ಟದ ಅರಳೆಯಿಂದ ತಯಾರಿಸುತ್ತಾರೆ, ಘಂಜಿಯನ್ನು ಸಿ.ಎಸ್.ಪಿ ಚಿತ್ರದುರ್ಗದಿಂದ ಖರಿದಿಸಲಾಗುತ್ತದೆ, ರಾಷ್ಟ್ರಧ್ವಜದ ಬಟ್ಟೆಗೆ ಉಂಡೆಳೆ ಹುರಿನೂಲ 34 ನಂಬರನ್ನು ಉಪಯೋಗಿಸಲಾತ್ತದೆ. ಈಗ ತುಳಸಿಗೇರಿ ಕೇಂದ್ರದಲ್ಲಿ ಒಟ್ಟು 60ಜನ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ 60 ಸಾವಿರ ಮೀಟರ್ ಧ್ವಜ ಬಟ್ಟೆ ತಯಾರಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಬೇಡಿಕೆಯಿದೆ, ಆದರೆ, ಮಜೂರಿ ಕಡಿಮೆ ಆಗುವ ಕಾರಣದಿಂದ ಕೆಲಸಗಾರರ ಕೊರತೆ ಇದೆ. ಇಲ್ಲಿ ತಯಾರಾದ ನಮ್ಮ ತ್ರಿವರ್ಣ ಧ್ವಜವು ವಿಶ್ವದೆಲ್ಲೆಡೆ ಹಾರಾಡುತ್ತದೆ.
ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಬೆಂಗೇರಿ ಹುಬ್ಬಳ್ಳಿ -23 ಸಂಸ್ಥೆಯು ಖಾದಿ ಗ್ರಾಮೋದ್ಯೋಗ ಕೇಂದ್ರ ಅಡಿಯಲ್ಲಿ ರಾಷ್ಟ್ರಧ್ವಜದ ಬಟ್ಟೆ ತಯಾರಿಕಾ (Tulasigeri) ಕಾಯಕಕ್ಕೆ ದಶಕದಿಂದ ಅಣಿಯಾಗಿದೆ.
— ಗಡಿನಾಡ ಕ್ರಾಂತಿ ಟೀಮ್