- Advertisement -Newspaper WordPress Theme
ಜಿಲ್ಲಾ ಜರ್ನಿಪ್ರವಾಶಿ ತಾಣಗಳು‘ಗುಮ್ಮಟ ನಗರಿ’ಯಲ್ಲಿ “ಮಹಾತ್ಮ”ನ ಹೆಜ್ಜೆ ಗುರುತುಗಳು

‘ಗುಮ್ಮಟ ನಗರಿ’ಯಲ್ಲಿ “ಮಹಾತ್ಮ”ನ ಹೆಜ್ಜೆ ಗುರುತುಗಳು

ವಿಜಯಪುರ ವಿಶ್ವ ಪ್ರಸಿದ್ಧ ಗೋಳಗುಮ್ಮಟ ಹ್ಯಾಗೆ ಚಿರಸ್ಥಾಯಿಯೋ, ಹಾಗೆಯೇ ಶಾಂತಿದೂತ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ವಿಜಯಪುರ ಜಿಲ್ಲೆಗೆ ಕಾಲಿಟ್ಟ ಆ ಸವಿಗಳಿಗೆಗಳು ಕೂಡಾ ಅಷ್ಟೇ ಅವಿಸ್ಮರಣೀಯ. ಆದಿಲ್‍ಶಾಹಿ ಸಾಮ್ರಾಜ್ಯ ಐತಿಹಾಸಿಕ ನಗರ ವಿಜಯಪುರದ ಇತಿಹಾಸದಲ್ಲಿ ಗಾಂಧೀಜಿಯವರ (Mahatma Gandhi Visit Vijayapura) ನಾಲ್ಕು ಮಹತ್ವದ ಹೆಜ್ಜೆ ಗುರುತುಗಳು ಅವರು ಓಡಾಡಿದ ನೆನಪುಗಳು ಜಿಲ್ಲೆಯ ಜನರಲ್ಲಿ ಇಂದಿಗೂ ಹಾಸುಹೊಕ್ಕಾಗಿವೆ.

ದಿನಾಂಕ 05.08.1918ರಲ್ಲಿ ಮುಂಬೈ ಪ್ರಾಂತ್ಯದ ರಾಜಕೀಯ ಪರಿಷತ್ತು ನಡೆದ ಸಂದರ್ಭದಲ್ಲಿ ಮೊದಲಬಾರಿಗೆ ವಿಜಯಪುರಕ್ಕೆ ಮಹಾತ್ಮ ಬಂದಿದ್ದರು. ಅಸಹಕಾರ ಚಳುವಳಿಯ ಪ್ರಚಾರಕ್ಕೆಂದು 28.05.1921ರಲ್ಲಿ 2ನೇ ಬಾರಿಗೆ ಖಾದಿ ಪ್ರಚಾರಕ್ಕಾಗಿ 1927ರಲ್ಲಿ ಗುಮ್ಮಟ ನಗರಿಗೆ 3ನೇ ಬಾರಿಗೆ ಕಾಲಿಟ್ಟರು. ಅಸ್ಪ್ರಷ್ಯತಾ ನಿವಾರಣಾ ಯಾತ್ರೆಯನ್ನು ಕೈಗೊಂಡಾಗ 4ನೇ ಬಾರಿಗೆ 1934ನೇ ಇಸವಿ ಮಾರ್ಚ್ 8 ರಂದು ಜಿಲ್ಲೆಯ ಹೊನವಾಡ, ತಿಕೋಟಾ, ತೊರವಿ, ವಿಜಯಪುರ ಮೊದಲಾದ ಕಡೆ ಸುತ್ತಾಡಿ ಜಿಲ್ಲೆಯ ಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದರು. ಅತೀ ಹತ್ತಿರದಿಂದ ಮಹಾತ್ಮನನ್ನು ನೋಡಲು ಆಗದಿದ್ದರೂ ಸಹಿತ ಅವರ ಕರೆಗೆ ನೌಕರಿ, ಮನೆ, ಮಠ, ಶಾಲೆ ಬಿಟ್ಟು ನಾವು ಹೊರಗಡೆ ಬಂದೆವು ಎಂದು ಜಿಲ್ಲೆಯ ಹಲವಾರು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ.

1918ರಲ್ಲಿ ಮುಂಬೈ ಪ್ರಾಂತ್ಯದ ಕಾಂಗ್ರೆಸ್ ಪರಿಷತ್ ವಿಜಯಪುರದಲ್ಲಿ ಸೇರಿತ್ತು. ಅದಕ್ಕೆ ಗಾಂಧೀಜಿ ಬಂದಿದ್ದರು. 1921ರ ಅಸಹಕಾರ ಅಂದೋಲನದಲ್ಲಿ ಶಹರದ ಜನರು ಅಷ್ಟೇ ಅಲ್ಲದೇ ಜಿಲ್ಲೆಯ ಜನರೂ ಸಹ ಭಾಗವಹಿಸಿ ಮಹಾತ್ಮನ ದರ್ಶನ ಪಡೆದಿದ್ದರು. ಗಾಂಧೀಜಿಯನ್ನು ಹತ್ತಿರದಿಂದ ನೋಡಿದ ಹಲವಾರು ಸ್ವಾತಂತ್ರ್ಯ ಯೋಧರ ಮನೆಯವರು ತಮ್ಮ ಹಿರಿಯರು ಹೇಳಿದ ಮಾತುಗಳನ್ನು ಈಗಲೂ ನೆನೆಪಿಸಿಕೊಳ್ಳುತ್ತಾರೆ. ಅಸ್ಪ್ರಷ್ಯತಾ ನಿವಾರಣಾ ಚಳುವಳಿ ಗಾಂಧೀಜಿಯವರು 1927 ಮತ್ತು 1934ರಲ್ಲಿ ಆರಂಭಿಸಿದಾಗ ಕರ್ನಾಟಕದಲ್ಲಿಯೂ ಸಹ ಈ ಆಂದೋಲನ ಹೆಚ್ಚಿಗೆ ತೀವ್ರಗೊಂಡಿತ್ತು. ಧಾರವಾಡ ಜಿಲ್ಲೆಯ ವೀರನಗೌಡ ಪಾಟೀಲ, ವಿಜಯಪುರದ ಕಾಕಾ ಸಾಹೇಬ ಕಾರಖಾನೀಸ (Mahatma Gandhi Visit Vijayapura) ಈ ಕಾರ್ಯವನ್ನು ತಮ್ಮ ಧ್ಯೇಯವಾಗಿಟ್ಟುಕೊಂಡು ತಮ್ಮ ಜೀವನವನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಾಪೂಜಿಯ ಪ್ರೇರಣೆಯಿಂದ ಸಮರ್ಪಿಸಿಕೊಂಡರು.

ಮಹಾತ್ಮನ ಪ್ರಭಾವಕ್ಕೆ ಒಳಗಾದ ನೂರಾರು ಜನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮುಧೋಳದ ಕೌಜಲಗಿ ಹನುಮಂತರಾಯರು. ಕಾಕಾ ಖಾರಕಾನೀಸರು ತಮ್ಮ ತಮ್ಮ ಗುಂಪು ಕಟ್ಟಿಕೊಂಡು ಹೋರಾಡಿದ್ದು ಒಂದು ಅದ್ಭುತವೇ ಸರಿ. ಜಿಲ್ಲೆಯ ಬಾಗಲಕೋಟೆ, ಕಲಾದಗಿ ಮತ್ತಿತರ ಕಡೆ ಬ್ರಿಟಿಷ್‍ರ ಭದ್ರಕೋಟೆ ಯಲ್ಲಿದ್ದರೂ. ಎಳ್ಳಷ್ಟೂ ಹೆದರದೇ ಮುನ್ನುಗ್ಗಿದ್ದರು. ಸ್ವದೇಶಿ ಚಳುವಳಿ ಬಿರುಸಿನಿಂದ ನಡೆದು, ಅದು ವಿರಾಟ ಸ್ವರೂಪದಲ್ಲಿ ಪ್ರಕಟಗೊಂಡಿದ್ದು ಗಾಂಧಿಯುಗದಲ್ಲೇ.

ಈ ಸುದ್ದಿಯನ್ನೂ ನೋಡಿ… ವಿಜಯಪುರದ ವೀರ ದೇಶಮುಖ HTTPS://WWW.YOUTUBE.COM/WATCH?V=MVCU0T7PND8 

1905ರಲ್ಲಿ ಗುಜರಾತನ ಸೂರತ್‍ನಲ್ಲಿ ಕಾಂಗ್ರೆಸ್ ಸಮಾವೇಶಗೊಂಡಾಗ ಕಾಂಗ್ರೆಸ್‍ನಲ್ಲಿದ್ದ ‘ಜಹಾಲ ಹಾಗೂ ‘ಮವಾಳ’ ಗುಂಪುಗಳ ನಡುವೆ ಅಧಿವೇಶನ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಏರ್ಪಟ್ಟಾಗ ಜಹಾಲ್ ಗುಂಪಿನ ಮುಖಂಡರು ಲೋಕಮಾನ್ಯ ತಿಲಕರ ಭಾಷಣಕ್ಕೆ ಅಡ್ಡಿಪಡಿಸಿದರು. ಆವಾಗ ವಿಜಯಪುರದಿಂದ ಆ ಸಮಾವೇಶಕ್ಕೆ ಹೋಗಿದ್ದ ಗಂಗಾಧರರಾವ ದೇಶಪಾಂಡೆ, ಕೌಜಲಗಿ ಶ್ರೀನಿವಾಸರಾಯರು, ಮುದವೀಡು ಕೃಷ್ಣರಾಯರು, ಆಲೂರು ವೆಂಕಟರಾಯರು, ಬಾಳಾಚಾರ್ಯ ಹೊಸಕೆರೆ ಮತ್ತಿತರರು ಈ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿದ್ದರು.

1906ರಲ್ಲಿ ತಿಲಕ್‍ರು ಬ್ರಿಟಿಷರಿಂದ ಬಂಧನಕ್ಕೆ ಒಳಗಾದಾಗ ವಿಜಯಪುರ ಜಿಲ್ಲೆಯಲ್ಲಿಯೂ ಸಹ ಪ್ರತಿಭಟನೆಗಳಾದವು. ಆವಾಗ ವಿಜಯಪುರದಲ್ಲಿ ಶಾಲಾ ಮಾಸ್ತರಾಗಿದ್ದ ಚಿಮ್ಮಲಗಿ ಭೀಮಾಚಾರ್ಯರು, ತಿಲಕರ ಭಾವಚಿತ್ರವನ್ನು ಶಾಲೆಯಲ್ಲಿ ಪ್ರದರ್ಶಿಸಿ ಬ್ರಿಟಿಷ್ ಪೊಲೀಸ್‍ರ ನಿರ್ಬಂಧಕ್ಕೆ ಗುರಿಯಾಗಿ ನೌಕರಿ ಯನ್ನು ಕಳೆದುಕೊಂಡು ಹೈದರಾಬಾದಿಗೆ ಪಲಾಯನ ಮಾಡಿದರು. ಇಂತಹ ನೂರಾರು ದೇಶಭಕ್ತರ ನೆನಪುಗಳು ವಿಜಯಪುರದ ನೆಲದಲ್ಲಿ ಹಾಸು ಹೊಕ್ಕಾಗಿವೆ.

ಡಾ.ಅನಿಬೆಸೆಂಟ್‍ರು 1915ರ ಸೆಪ್ಟೆಂಬರ್‍ನಲ್ಲಿ ತಮ್ಮ ‘ಹೋಂ ರೂಲ್ ಲೀಗ್’ ನ್ನು ಮದ್ರಾಸ್‍ನಲ್ಲಿ ಸ್ಥಾಪಿಸಿದರೆ, ತಿಲಕರು 1916ರ ಏಪ್ರೀಲ್ ತಿಂಗಳಲ್ಲಿ ತಮ್ಮ ‘ಹೋಂ ರೂಲ್ ಚಳುವಳಿ’ ಯನ್ನು ಆರಂಭಿಸಿ ‘ಸ್ವರಾಜ್ಯ ಸಂಘ’ವನ್ನು ಸ್ಥಾಪಿಸಿದರು. ಅದರ ಶಾಖೆಗಳು ಬೆಳಗಾವಿ, ಸಂಕೇಶ್ವರ, ಬಾಗಲಕೋಟೆ ಅಲ್ಲದೇ ವಿಜಯಪುರದಲ್ಲಿಯೂ ಸಹ ತೆರೆಯಲ್ಪಟ್ಟವು.

ಮುಂಬೈ ಪ್ರಾಂತ್ಯ ರಾಜಕೀಯ ಪರಿಷತ್ 1916 ರಲ್ಲಿ ಬೆಳಗಾವಿಯಲ್ಲಿಯ ಸಮಾವೇಶಗೊಂಡಿದ್ದಾಗ, ಬೆಳಗಾವಿಗೆ ಲೋಕಮಾನ್ಯ ತಿಲಕ್‍ರು ಮತ್ತು ಮಹಾತ್ಮಾ ಗಾಂಧೀಜಿಯವರು ಬಂದಿದ್ದರು. ಅದಕ್ಕೆ ವಿಜಯಪುರ ಜಿಲ್ಲೆಯಿಂದ ಕೌಜಲಗಿ ಶ್ರೀನಿವಾಸರಾಯರು ಸೇರಿದಂತೆ ಹಲವಾರು ದೇಶಭಕ್ತರು ಆ ಸಮ್ಮೇಳನಕ್ಕೆ ಹೋಗಿದ್ದರು. ಮುಂಬೈ ಪ್ರಾಂತ್ಯ ರಾಜಕೀಯ ಪರಿಷತ್ತಿನ 17ನೆಯ ಸಭೆ ಮೇ 15, 1918ರ ರಂದು ನಡೆದಿತ್ತು. ಆ ಸಭೆಗೆ ಕೌಜಲಗಿ ಶ್ರೀನಿವಾಸರಾಯರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಅಧ್ಯಕ್ಷತೆಯನ್ನು ‘ಲೋಹಪುರುಷ’ ಸರದಾರ ವಲ್ಲಭಭಾಯ್ ಪಟೇಲರ ಸಹೋದರ ವಿಠ್ಠಲಭಾಯ್ ಪಟೇಲರು ವಹಿಸಿದ್ದು ಅದಕ್ಕೆ ಗಾಂಧೀಜಿಯವರು ಸರೋಜಿನಿ ನಾಯ್ಡು ಅವರು ಬಂದಿದ್ದರು. ವಿಜಯಪುರ ಜಿಲ್ಲೆಗೆ ಇದು ಗಾಂಧೀಜಿಯವರ ಮೊದಲ ಭೇಟಿಯಾಗಿತ್ತು.

ಇನ್ನೊಂದು ಪ್ರಸಂಗ ಹೀಗಿದೆ. 1934ರಲ್ಲಿ ವಿಜಯಪುರದಲ್ಲಿ ‘ಅಸ್ಪ್ರಷ್ಯತಾ ನಿವಾರಣಾ ಸಭೆ’ ಯೊಂದನ್ನು ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಾತನಾಡಲು ಎದ್ದುನಿಂತ ಗಾಂಧೀಜಿಯವರು ಈ ಸಭೆಯಲ್ಲಿ ಎಷ್ಟು ಜನರು ಅಸ್ಪ್ರಷ್ಯರಿದ್ದಾರೆ? ಎಂದು ಸಂಘಟಕರನ್ನು ಕೇಳಿದರು. ಆವಾಗ ಸಂಘಟಕರಿಂದ ಯಾರೂ ಇಲ್ಲ ಎನ್ನುವ ಉತ್ತರ ಬಂದಿತು. ಇದರಿಂದ ಶಾಂತಮೂರ್ತಿಯಾದ ಗಾಂಧೀಜಿಯವರು ಸಿಟ್ಟಾದರು.

‘ಹಾಗಾದರೆ ಈ ಸಭೆಯನ್ನು ನಡೆಸಿ ಉಪಯೋಗವಿಲ್ಲ’ ಎಂದು ಹೊರಟೇ ಬಿಟ್ಟರು. ಅನಂತರ ಸಭೆಯ ವಕ್ತಾರರು ಅಸ್ಪ್ರಷ್ಯರನ್ನು ಕರೆದುಕೊಂಡು ಬಂದು ಮಧ್ಯಾಹ್ನದ ಸಭೆಯಲ್ಲಿ ಕೂಡ್ರಿಸಿದರು. ಇದರಿಂದ ಸಂತುಷ್ಟಗೊಂಡ ಮಹಾತ್ಮ ಗಾಂಧೀಜಿಯವರು ಸಭಿಕರನ್ನು ಉದ್ದೇಶಿಸಿ ಮಾತನಾಡಿ, ಅಸ್ಪ್ರಷ್ಯತೆಯ ಬಗ್ಗೆ ಸವರ್ಣಿಯರಿಗಿದ್ದ ಜಾತಿಯ ಪೊರೆಯನ್ನು ಕಳಚಿದರು. ಇದೇ ದಿನ ಸಂಜೆ ಗಾಂಧೀಜಿ, ಸರೋಜಿನಿ ನಾಯ್ಡು, ವಿಠ್ಠಲಬಾಯಿ ಪಟೇಲ ಮುಂತಾದ ಗಣ್ಯರು, ದಿನಕರ, ಡಂಬಳ ಅವರ ಮಾರ್ಗದರ್ಶನದಲ್ಲಿ ವಿಶ್ವಪ್ರಸಿದ್ಧ ಗೋಳಗುಮ್ಮಟವನ್ನು ನೋಡಿ ಆನಂದಿಸಿದರು.

ಮರು ದಿನ ಮೇ 6 ರಂದು ಮತ್ತೊಮ್ಮೆ ಗಾಂಧೀಜಿಯವರು ಭಾಷಣ ಮಾಡಿದರು . ಸಭೆಯಲ್ಲಿ ಯುವಕನೊಬ್ಬನ ಕೈಯಲ್ಲಿದ್ದ ಕಾಗದದ ನಿಶಾನೆಯನ್ನು ನೋಡಿ ಬಾಪೂಜಿ ಸ್ವರಾಜ್ಯ ಕೇವಲ ಕಾಗದದಲ್ಲಿ ಉಳಿಯಬಾರದು. ಅದನ್ನು ನಾವು ಪಡೆದೇ ತೀರಬೇಕು ಎಂದು ಹೇಳಿದರು. ಅದಕ್ಕೆ ಗಾಂಧೀಜಿಯವರು ನಾವೆಲ್ಲಾ ನಿಸ್ವಾರ್ಥತೆಯಿಂದ ಹೋರಾಡಿ ಶಾಂತಿಯ ಮಾರ್ಗದಲ್ಲಿ ಅಹಿಂಸಾ ತತ್ವದಲ್ಲಿ ಸ್ವಾತಂತ್ರ್ಯವನ್ನು ಪಡೆಯೋಣ ಎಂದರು. ಈ ಭಾಷಣದ ನಂತರ ವಿಜಯಪುರದಿಂದ ಕೆನೆಮೊಸರಿಗೆ ಹೆಸರಾದ ಕೋಲ್ಹಾರಕ್ಕೆ ಮಹಾತ್ಮಾಜಿ ಪ್ರಯಾಣ ಬೆಳೆಸಿದರು. ಪುಣೆಯ ಗುತ್ತಿಗೆದಾರರಾದ ರಾನಡೆ ಅವರು ಗಾಂಧೀ ದಂಪತಿಗಳಿಗೆ ನೂಲಿನ ಹಾರ ಹಾಕಿ ಬೀಳ್ಕೊಟ್ಟರು (Mahatma Gandhi Visit Vijayapura).

ವಿಜಯಪುರ ಪುರಸಭೆಯವರು ಮಾನ ಪತ್ರ ಅರ್ಪಿಸಿದರು. ವರ್ತಕರು ವಿಶೇಷವಾಗಿ ಗಾಂಧೀಜಿಯವರಿಗೆ ಸನ್ಮಾನಿಸಿದರು. ಅವರ ಜೊತೆಯಲ್ಲಿ ಕಸ್ತೂರಬಾ ಗಾಂಧಿಜಿ ಸಹ ಇದ್ದರು. ದಾರಿಯುದ್ಧಕ್ಕೂ ಮಹಾತ್ಮನ ದರ್ಶನಕ್ಕೆ ಜನರು ಕಾದು ನಿಂತಿದ್ದರು. ಗಾಂಧೀಜಿ ಪ್ರಭಾವಕ್ಕೆ ಒಳಗಾಗಿ ನೂರಾರು ಜನರು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದರು ಎಂದು ಕೋಲ್ಹಾರದ ಶಂಕರರಾವ್ ದೇಶಪಾಂಡೆ ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ತದನಂತರ ಗಾಂಧೀಜಿಯವರು ಕರೆಕೊಟ್ಟ ಅಸಹಕಾರ ಚಳುವಳಿಯ ಅಂಗವಾಗಿ ರಾಷ್ಟ್ರೀಯ ಶಾಖೆಗಳು ಹುನಗುಂದ, ಮುಧೋಳ, ಬಾಗಲಕೋಟೆ ಹಾಗೂ ವಿಜಯಪುರದಲ್ಲಿಯೂ ಸಹ ಸ್ಥಾಪಿಸಲ್ಪಟ್ಟವು. ಹತ್ತು ಸಾವಿರ ರೂಪಾಯಿ ತಿಲಕ ನಿಧಿಗೆ ಸಂಗ್ರಹವಾಯಿತು.

“ಒಂದು ವರ್ಷದಲ್ಲಿ ಸ್ವರಾಜ್ಯ” ಎಂಬ ಘೋಷಣೆಯೊಂದಿಗೆ ತಿಲಕರ ಸ್ವರಾಜ್ಯ ನಿಧಿಗೆ ಒಂದು ಕೋಟಿ ರೂ. ಸಂಗ್ರಹಿಸುವ ಹುಮ್ಮಸ್ಸಿನೊಂದಿಗೆ ಅಸಹಕಾರ ಚಳುವಳಿ ಬಗ್ಗೆ ಜನಾಭಿಪ್ರಾಯ ಮೂಡಿಸುವ ಸಲುವಾಗಿ ಮಹಾತ್ಮಾ ಹಿಂದೆ ಅರ್ಧಕ್ಕೆ ನಿಲ್ಲಿಸಿದ್ದ ತಮ್ಮ ಕರ್ನಾಟಕದ ಪ್ರವಾಸವನ್ನು ಪುನರಾರಂಭಿಸಿದರು. 1921 ಮೇ 28ರಂದು ಬಾಗಲಕೋಟೆಯಲ್ಲಿ ಭಾಷಣ ಮಾಡಿದರು. ಅವರ ಭಾಷಣ ಕೇಳಲು ಸುಮಾರು 10,000 ಜನ ಸೇರಿದ್ದರು. ತಿಲಕ ಸ್ವರಾಜ್ಯ ನಿಧಿಗೆ ಆವಾಗ 1,000 ರೂಪಾಯಿಗಳನ್ನು ಸಂಗ್ರಹಿಸಲಾಗಿತ್ತು. ಬಾಗಲಕೋಟೆಯಿಂದ ವಿಜಯಪುರಕ್ಕೆ ಮೋಟಾರ ವಾಹನ ಪ್ರವಾಸ ಮಾಡಿದ್ದುರು. ದಾರಿ ಯುದ್ಧಕ್ಕೂ ಉರಿಬಿಸಲಿನಲ್ಲಿ ಪ್ರಯಾಣ ಮಾಡುವಾಗ ಖಡಿ (ಜಲ್ಲಿ) ಒಡೆಯುತ್ತಿದ್ದ ಮಹಿಳೆಯರನ್ನು ಕಂಡು ಮಹಾತ್ಮನಿಗೆ ವ್ಯಥೆಯಾಯಿತು. ಇಂತಹ ದುಸ್ಥಿತಿ ಮಹಿಳೆಯರಿಗೆ ಬರಬಾರದು. ‘ಖಾದಿ ಗ್ರಾಮೋದ್ಯೋಗವೇ ಈ ಎಲ್ಲದಕ್ಕೂ ಮದ್ದು’ ಪ್ರತಿ ಮನೆಯಲ್ಲಿ ರಾಟೆ ತಿರುಗಬೇಕು ಎಂದು ಮಹಾತ್ಮ ಹೇಳಿದರೆಂದು ಗಾಂಧೀ ಅವರ ಒಡನಾಡಿ ಗಂಗಾಧರರಾವ ದೇಶಪಾಂಡೆ ತಮ್ಮ ಆತ್ಮ ಚರಿತ್ರೆಯಲ್ಲಿ ದಾಖಲಿಸಿದ್ದಾರೆ (Mahatma Gandhi Visit Vijayapura).

ಗಾಂಧೀಜಿ ವಿಜಯಪುರಕ್ಕೆ ಬಂದಾಗ ಸಂಜೆಯಾಗಿತ್ತು. ಮೊದಲು ಮಹಿಳೆಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು ನಂತರ ನಗರದ ತಾಸಬಾವಡಿ ಮೈದಾನದಲ್ಲಿ 12,000 ಜನರು ನೆರೆದಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅಸಹಕಾರ ಚಳುವಳಿಯ ಬಗ್ಗೆ ಮಾತನಾಡಿದರು. ಆ ಸಭೆಯಲ್ಲಿ ಪುರಸಭೆ ಹಾಗೂ ವರ್ತಕರ ಸಂಘಗಳ ಪ್ರತ್ಯೇಕ ಬಿನ್ನವತ್ತಳೆಯನ್ನು ಗಾಂಧಿಜಿಯವರಿಗೆ ಅರ್ಪಿಸಲಾಯಿತು. ಈ ಸಭೆಯಲ್ಲೂ ಸಹ ತಿಲಕ ಸ್ವರಾಜ್ಯ ಫಂಡಿಗೆ ದೇಣಿಗೆಯನ್ನು ಸಂಗ್ರಹಿಸಲಾಯಿತು.

ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರ ವ್ಯಕ್ತಿತ್ವ ಧೋರಣೆಗಳಿಂದ ಪ್ರಭಾವಿತರಾದವರಲ್ಲಿ ಸುಗಂಧಿ ಮುರುಗೆಪ್ಪನವರು ಪ್ರಮುಖರು. ಇವರು ಗಾಂಧಿಜಿಯವರಿಗೆ 1000 ರೂಪಾಯಿಗಳನ್ನು ದೇಣಿಗೆ ನೀಡಿ, ವಿಜಯಪುರದಲ್ಲಿ ‘ಹರಿಜನ ಸೇವಾ ಸಂಘ’ವನ್ನು 1925 ರಲ್ಲಿ ಸ್ಥಾಪಿಸಲು ಮುಂದಾದರು. ತಮ್ಮ ಅಡತಿಯ ಲಾಭಾಂಶದ ಸ್ವಲ್ಪ ಭಾಗವನ್ನು ಕಾಂಗ್ರೆಸ್ ಸಂಸ್ಥೆಗೆ ಪ್ರತಿ ತಿಂಗಳು ನೀಡುವಂತೆ ಅಡತಿಯ ಗುಮಾಸ್ತನಿಗೆ ಸೂಚಿಸಿದರು. ಇಂತಹ ಉತ್ಕಟ ದೇಶಪ್ರೇಮ ಸುಗಂಧಿಯವರದಾಗಿತ್ತು.

1934ರಲ್ಲಿ ಅಸ್ಪ್ರಷ್ಯತಾ ನಿವಾರಣಾ ಯಾತ್ರೆ ಕೈಗೊಂಡಾಗ ಜಿಲ್ಲೆಯ ಹೊನವಾಡದ ಅಸ್ಪ್ರಷ್ಯತಾ ಕೇರಿಗೆ ಭೇಟಿ ನೀಡಿದ ಗಾಂಧೀಜಿಯವರು, ನಾವೆಲ್ಲರೂ ದೇವರ ಮಕ್ಕಳು ನಮ್ಮಲ್ಲಿ ಭೇದ-ಭಾವ ಸಲ್ಲದು, ಉಚ್ಛ-ನೀವ ಬಡವ ಬಲ್ಲಿದ ಎನ್ನುವ ತಾರತಮ್ಯ ಕೂಡದು. ಸವರ್ಣಿಯ ಮತ್ತು ಅವರ್ಣಿಯ ಇಬ್ಬರಲ್ಲೂ ಬರಲು ದೇವರು ನೆಲೆಸಿದ್ದಾನೆ. ಅಸ್ಪ್ರಷ್ಯತೆ ಮಹಾಪಾಪ ಅದನ್ನು ತೊಡೆದುಹಾಕಲು ಎಲ್ಲರೂ ಪಣ ತೊಡಬೇಕಾಗಿದೆ. ಎಂದು ಹೇಳಿದರೆಂದು ವೀರನಗೌಡರು ತಮ್ಮ ಲೇಖನವೊಂದರಲ್ಲಿ ದಾಖಲಿಸಿದ್ದಾರೆ. ಇಂತಹ ನೂರಾರು ನೆನಪುಗಳು ಇತಿಹಾಸದಲ್ಲಿ ದಾಖಲಾಗಿವೆ. ಸದ್ಯಕ್ಕೆ ವಿಜಯಪುರ ನಗರದಲ್ಲಿ ಮಹಾತ್ಮಾ ಗಾಂಧೀ ವೃತ್ತವಿದ್ದು, ಇಲ್ಲಿ ಬಾಪೂಜಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಮಹಾತ್ಮನ ಹೆಸರಿನ ಶಾಲೆ, ಸಂಘ-ಸಂಸ್ಥೆಗಳು ಜಿಲ್ಲೆಯಲ್ಲಿವೆ. ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ ಸ್ವರಾಜ್ಯ ಸೂರ್ಯ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ನೆನಪುಗಳು ಇಂದಿಗೂ ಗುಮ್ಮಟ ನಗರಿಯಲ್ಲಿ ಗೋಳಗುಮ್ಮಟದಂತೆ ಪ್ರತಿಧ್ವನಿಸುತ್ತವೆ.

ವಿಜಯಪುರದಲ್ಲಿ ಮಹಾತ್ಮನ ಹೆಜ್ಜೆ ಗುರುತುಗಳು :
1 ನೇ ಭೇಟಿ ಮೇ 5 ಮತ್ತು 6, 1918 ರಂದು ಮುಂಬೈ ಪ್ರಾಂತ್ಯ ರಾಜಕೀಯ ಪರಿಷತ್ತಿನಲ್ಲಿ ಭಾಗವಹಿಸಲು ಬಂದಿದ್ದರು.
2 ನೇ ಭೇಟಿ ದಿನಾಂಕ 26 ಮತ್ತು 27, 1921 ರಂದು ತಿಲಕ್ ಸ್ವರಾಜ್ಯ ನಿಧಿ ಸಂಗ್ರಹಣೆಗಾಗಿ ವಿಜಯಪುರಕ್ಕೆ ಬಂದಿದ್ದರು. ಇದೇ ಸಮಯದಲ್ಲಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರು ಭಾಗವಹಿಸುವಂತೆ ಮಹಾತ್ಮಾ ಮನವಿ ಮಾಡಿಕೊಂಡಿದ್ದರು.
3 ನೇ ಭೇಟಿ 1927 ಫೆಬ್ರುವರಿ 21 ರಂದು ಖಾದಿ ಪ್ರಚಾರ, ಅಸ್ಪ್ರಷ್ಯತಾ ನಿವಾರಣಾ ಆಂದೋಲನ ಹಾಗೂ ಸ್ವದೇಶ ಚಿಂತನೆಗಳ ಸಂದೇಶ ಸಾರಲು ವಿಜಯಪುರಕ್ಕೆ ಬಂದಿದ್ದರು.
4 ನೇ ಭೇಟಿ ಮಾರ್ಚ 8, 1934 ರಂದು ದೇಶ ವ್ಯಾಪಿ ಅಸ್ಪ್ರಷ್ಯತಾ ನಿವಾರಣಾ ಯಾತ್ರೆಯನ್ನು ಕೈಗೊಂಡಾಗ ಐತಿಹಾಸಿಕ ನಗರಿ ವಿಜಯಪುರಕ್ಕೆ ರಾಷ್ಟ್ರಪಿತ ಬಂದಿದ್ದರು

ನೇತಾಜಿ ಗಾಂಧಿ

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!