- Advertisement -Newspaper WordPress Theme
ಹೋರಾಟ ವೀರರುಕ್ರಾಂತಿ ಕೇಸರಿ, ಹಂಡೆ ವಜೀರ ಸೈನಿಕರು. ಇದು ಸ್ವಾತಂತ್ರ್ಯ ಹೋರಾಟದ ರೋಚಕ ಕಥೆ

ಕ್ರಾಂತಿ ಕೇಸರಿ, ಹಂಡೆ ವಜೀರ ಸೈನಿಕರು. ಇದು ಸ್ವಾತಂತ್ರ್ಯ ಹೋರಾಟದ ರೋಚಕ ಕಥೆ

ಭಾರತ ಸ್ವಾತಂತ್ರ್ಯ ಹೋರಾಟದ ದೀರ್ಘ ಯಜ್ಞದಲ್ಲಿ, ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಪ್ರಾಣಗೈದವರ ರಕ್ತರಂಜಿತ ಇತಿಹಾಸ ಪ್ರತಿಯೋರ್ವರನ್ನು ರೋಮಾಂಚನಗೊಳಿಸುತ್ತದೆ. ಗುಲಾಮಗಿರಿಯ ಸಂಕೋಲೆಯನ್ನು ಕಿತ್ತೆಸೆಯಲು ನಡೆಸಿದ ಅನೇಕ ಸ್ವಾಭಿಮಾನಿಗಳು ನಮಗೆ ಆದರ್ಶವಾಗಿದ್ದಾರೆ. ವೀರಮರಣವನ್ನಪ್ಪಿದ ಅರಿಭಯಂಕರ ರಣಶೂರ, ದೇಶಪ್ರೇಮಿ ಸುರಪೂರ ಸಂಸ್ಥಾನದ ರಾಜಾ ವೆಂಕಟಪ್ಪನಾಯಕನ ಸಾಹಸ ಅನುಪಮವಾದದ್ದು. ಇಂತಹ ರಾಜರ ಹೋರಾಟದ ಯಶಸ್ವಿಯ ಭಾಗವಾಗಿದ್ದ ವಿಜಯಪುರದ ಬಾಗೇವಾಡಿ ತಾಲೂಕಿನ ಕರಿಭಂಟನಾಳದ ಶ್ರೀ ಗುರು ಗಂಗಾಧರೇಶ್ವರರು (Gangadhareshwara Swamiji) ಮತ್ತು ಐದು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ವೀರಶೈವ ಹಂಡೆ ವಜೀರ ಸಮುದಾಯದ ಸೈನಿಕರ ಕೊಡುಗೆ ಅವಿಸ್ಮರಣೀಯ.

ಕರಿಭಂಟನಾಳದ ಶ್ರೀಮಠವು ಕಾವಿ ಜಗತ್ತಿಗೆ ಮಾತ್ರವಲ್ಲದೆ, ಕೋವಿ ಹಿಡಿದು ಸ್ವತಂತ್ರಸಮರ ಸಾಧಿಸಿದ್ದಕ್ಕೂ ಮಾದರಿ. ಹತ್ತಿರದಲ್ಲಿದ್ದ ರೇಬಿನಾಳ ಗ್ರಾಮದ ಮಾನವಂತ ಮಹಿಳೆಯೊಬ್ಬಳು ಬ್ರಿಟಿಷಧಿಕಾರಿ ನ್ಯೂಮಾಸನ್ನ ಅತ್ಯಾಚಾರಕ್ಕೀಡಾಗಿ, ಅವಮಾನ ತಾಳದೆ ಆತ್ಮಹತ್ಯೆಗೆ ಶರಣಾದ ಸಂಗತಿಯು ಗುರು ಗಂಗಾಧರೇಶ್ವರರನ್ನು ಆತಂಕಕ್ಕೀಡು ಮಾಡಿತು. ಕಾವಿಯಿಂದ ಕೋವಿಯತ್ತ ಮನಃ ಕೆರಳಿಸಿ, ಹೋರಾಟಕ್ಕೆ ಅಣಿಗೊಳಿಸಿತು. ಹಾಗಾಗಿ ಧರ್ಮೋಪದೇಶ ದೊಂದಿಗೆ ರಾಷ್ಟ್ರಧರ್ಮದ ವಿಜಯಕ್ಕಾಗಿ ಅರ್ಹನಿಶ ಶ್ರದ್ದೆ ಮತ್ತು ಶ್ರಮಗೈದು ಭಕ್ತರೆದೆಯಲ್ಲಿ ರಾಷ್ಟ್ರಭಕ್ತಿಯನ್ನುಕ್ಕಿಸಿದರು.

ಗಂಗಾಧರೇಶ್ವರರು ಆಯುರ್ವೇದ ಔಷದೋಪಚಾರಗೈದು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಆದ್ದರಿಂದ ಸಹಜವಾಗಿ ಔಷದಕ್ಕಾಗಿ ಮರವನ್ನು ಕಡಿಸಿದ ಘಟನೆಯನ್ನೇ ಅಪರಾಧಕ್ಕೆ ಕಾರಣಗೊಳಿಸಿ ಶ್ರೀಗಳನ್ನು ಜೈಲಿಗಟ್ಟಿದರು. ಆಗ ಕಾಣಲು ಬಂದ ಭಕ್ತರದಂಡು ಕಂಡ ಠಾಣಾಧಿಕಾರಿಗಳು ತಲ್ಲಣಿಸಿದರು. ಪವಾಡ ಸದೃಶ್ಯ ಸಂಗತಿಗಳಿಂದಂತೂ ಅಕ್ಷರಶಃ ಹೆದರಿದರು. ಆಕ್ರೋಶ ಭುಗಿಲೆದ್ದು ಉಂಟಾಗುವ ಪರಿಣಾಮದ ಭೀಕರತೆಯನ್ನು ನಾಗೂರಿನ ಶ್ರೀಬಸನಗೌಡನು ತಿಳಿಸಿದಾಗ ವಿಧಿಯಿಲ್ಲದೆ ಬಿಡುಗಡೆಗೊಳಿಸಿದರು. ಭಾರತದ ಅಂದಿನ ಆರ್ಥಿಕತೆಗೆ ಗುಡಿಕೈಗಾರಿಕೆಗಳೇ ಜೀವಾಳದಂತಿದ್ದವು. ಅದರಲ್ಲೂ ನವಲಿಯಲ್ಲಿದ್ದ ನೇಕಾರರು ಉತ್ಪಾದಿಸುವ ನೂಲಿಗೆ ಮತ್ತು ಬಟ್ಟೆಗೆ ಅಂತರರಾಷ್ಟ್ರದಲ್ಲೂ ತುಂಬಾ ಬೇಡಿಕೆಯಿತ್ತು. ಆದರೆ ನೇಕಾರಿಕೆಯ ಮೇಲಿನ ಪ್ರತಿಬಂಧಕ ಕಾಯ್ದೆ ಮೂಲಕ ಬ್ರಿಟಿಷ ಸರಕಾರ ಘೋರ ನರಕವನ್ನು ಸೃಷ್ಟಿಸಿತ್ತು. ಕಾಯ್ದೆ ಉಲ್ಲಂಘಿಸಿದ ನೇಕಾರರಿಗೆ ಕಾಲು ಮತ್ತು ಕೈ ಬೆರಳುಗಳನ್ನು ಕತ್ತರಿಸಿ ಕ್ರೂರತನ ಹಾಗೂ ದೌರ್ಜನ್ಯವೆಸಗಿದ್ದು ಕಂಡ ಶ್ರೀಗಳ ಮನದಲ್ಲಿ ಹೋರಾಟದ ಕಿಡಿ ಪ್ರಜ್ವಲಿಸಿದ್ದರಿಂದ ನೇರವಾಗಿಯೇ ಹೋರಾಟಕ್ಕಿಳಿದರು.

ಬಂಗಾಳದಲ್ಲಿನ ಆನಂದ ಮಠಕ್ಕೆ ಭೇಟಿಯಾದರಲ್ಲದೆ, ಸ್ವತಂತ್ರ ಸೈನ್ಯಗಟ್ಟಿ ಬ್ರಿಟಿಷರ ಬೆನ್ನಟ್ಟುವ ಸಂಕಲ್ಪಗೈದರು. ಒಂದೇ ಸಮುದಾಯಕ್ಕೆ ಸೇರಿದ ಯುವಕರ ಸೈನ್ಯ ರಚಿಸಿ, ಸ್ವತಂತ್ರ ಹೋರಾಟವನ್ನು ಬಲಪಡಿಸುವ ತಮ್ಮ ಮನದಿಚ್ಚೆಯನ್ನು ಸರ್ವಭಕ್ತರ ಮುಂದಿಟ್ಟು ಕ್ರಾಂತಿಯ ಕದ ತಟ್ಟಿದಾಗ, ಗುರುಭಕ್ತಿ ಮತ್ತು ದೇಶಭಕ್ತಿಯನ್ನು ಮೆರೆಯಲು ವೀರಶೈವ ಹಂಡೆವಜೀರ ಸಮುದಾಯದವರು ಮುಂದಾಗಿ ಯುವಕರನ್ನೊಪ್ಪಿಸಿದರು. ಸಂತಸಭರಿತರಾದ ಶ್ರೀಗಳು ಯುವಕರಿಗೆ ದೈಹಿಕ ಮತ್ತು ಮಾನಸಿಕವಾಗಿಯೂ ಬಲಗೊಳಿಸಲು ತರಬೇತಿ ನೀಡಿದರು. ಭರ್ಚಿ-ಕಲ್ಲು ಎಸೆಯುವ, ಕತ್ತಿ,-ಕವಣಿ ಬೀಸುವ, ಗುಂಡು ಮತ್ತು ಭಾರವಾದ ವಸ್ತುಗಳನ್ನೆತ್ತುವುದು, ಎಳೆಯುವದು, ಈಜುವುದು, ಓಡುವುದು, ಜಿಗಿಯುವುದು, ಕುದುರೆ ಓಡಿಸುವುದು, ಸೇರಿದಂತೆ ಅನೇಕ ದೈಹಿಕ ಕಸರತ್ತುಗಳ ಮೂಲಕ ರಣಸಮರ್ಥರನ್ನಾಗಿಸಿದರು. ಅಂತೆಯೇ ಕರಿಯಂತ ಭಂಟರನ್ನು ತಯ್ಯಾರಿಸಿದ ಆಲಯ(ಸ್ಥಳ)ವೇ ಕರಿಭಂಟನಾಳ ಎನ್ನಲು ಕಾರಣವಾಗಿದೆ ಎಂಬುವುದು ದಾಖಲೆಗಳ ಅಂಬೋಣ.

ಸುರಪೂರ ಸಂಸ್ಥಾನದರಸ ವೆಂಕಟಪ್ಪ ನಾಯಕನು ಪಟ್ಟಾಭಿಷೇಕಗೊಂಡಾಗ ಕೇವಲ ಏಳು ವರ್ಷದ ಬಾಲಕ. ಆದ್ದರಿಂದ ತಾಯಿ ಈಶ್ವರಮ್ಮಳೇ ರಾಜ್ಯ ಭಾರದ ಸೂತ್ರವನ್ನು ಕೈಗೆತ್ತಿಕೊಂಡು ಜನ ಹಿತವನ್ನು ಕಾಪಾಡಿದಳು. ಆದರೆ ರಾಜಕೀಯ ಪ್ರತಿನಿಧಿಯಾಗಿ ಬಂದಿದ್ದ ಬ್ರಿಟಿಷ ಅಧಿಕಾರಿಗಳ ಹಸ್ತಕ್ಷೇಪ ಹಾಗೂ ರಾಜಕೀಯ ಪಿತೂರಿಗಳಿಂದ ಬಂಧನಕ್ಕೀಡಾದಳು. ಆತಂಕದಲ್ಲಿದ್ದ ರಾಣಿ ಈಶ್ವರಮ್ಮಳನ್ನು ಗುರು ಗಂಗಾಧರೇಶ್ವರರು (Gangadhareshwara Swamiji) ಭೇಟಿಯಾಗಿ ಸಮಾದಾನ ಗೈದು ಹೆದರದೆ ಎದುರಿಸುವ ಮಾರ್ಗೋಪಾಯಗಳನ್ನು ತಿಳಿಸಿದರು. ರಾಜನಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಕೋರಿಕೆಯಿತ್ತಾಗ ಹರ್ಷದಿಂದೊಪ್ಪಿ ಸದಾ ಬೆಂಗಾವಲಿಗೆ ನಿಂತು ಶ್ರೀರಕ್ಷೆ ನೀಡಿದರು. ಮುಂದೆ ತಮ್ಮ ಸೈನ್ಯವನ್ನೂ ಕಳುಹಿಸಿ ಕೊಟ್ಟರು.

ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುವಂತೆ ರಾಜಾವೆಂಕಟಪ್ಪನಾಯಕನು ಬೆಳೆಯುತ್ತಾ ಸಂಗ್ರಾಮಸಿಂಹವಾಗಿ ಗರ್ಜಿಸಲು ಸಿದ್ಧವಾದನು. ದಕ್ಷಿಣ ಭಾರತದ ಸಂಸ್ಥಾನದರಸರೆಲ್ಲರನ್ನು ಒಂದಾಗಿಸಿ, ಬ್ರಿಟಿಷರ ವಿರುದ್ಧದ ರಣಘೋಷಕ್ಕಾಗಿ ಕ್ರಾಂತಿವೀರನಾಗಿ ಕಂಗೊಳಿಸಲು ರಣಕಹಳೆಗೆ ಕಾತರಿಸಿದನು. ಬ್ರಿಟಿಷರ ಕುತಂತ್ರ ನೀತಿ ರೊಚ್ಚಿಗೆಬ್ಬಿಸಿತು. ಕೊಟ್ನಾಳ ಕೋಟೆಯಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದ್ದ ಸುದ್ಧಿ ಗ್ರಹಿಸಿದ ಬ್ರಿಟಿಷರು, ಕೋಟೆಯನ್ನೇ ನೆಲಸಮಗೊಳಿಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಾಗಲಂತೂ ರಣೋತ್ಸಾಹ ಇಮ್ಮಡಿಸಿತು. ಸುರಪೂರ ಸಂಸ್ಥಾನದ ಬಂಡಾಯದ ಬಾವುಟವನ್ನೆತ್ತಿ ಹಿಡಿಯುವಂತೆ ವ್ಯಕ್ತಪಡಿಸಿದ ಶ್ರೀಗಳ ಮನದಿಂಗಿತವನ್ನು ವಿಜಯಪುರದ ಬಹದ್ದೂರ ಬಸವಲಿಂಗಪ್ಪ ವೀರಸಂಗಪ್ಪ ದೇಶಮುಖರು ಭಕ್ತಿಪೂರ್ವಕವಾಗಿ ನೆರವೇರಿಸಿದ್ದರು. ಬಂಡಾಯವನ್ನು ಬಲಪಡಿಸಿದ ಆರೋಪದಡಿ ಸೊಲ್ಲಾಪೂರದ ಜೈಲಿನಲ್ಲಿ ಬಂಧಿತರಾದ ದೇಶಮುಖರು, ಮಾಹಿತಿ ಸಂಗ್ರಹಿಸಲು ಪೋಲಿಸರು ಚಿತ್ರಹಿಂಸೆ ಕೊಟ್ಟರೂ ಬಾಯ್ಬಿಚ್ಚದೆ 1857ರಲ್ಲಿ ಗಲ್ಲಗೇರಿಸಲ್ಪಟ್ಟು ಹುತಾತ್ಮರಾದ ರೋಚಕಿತಿಹಾಸ ಶ್ಲ್ಯಾಘನೀಯ.

ಹಿಂದುಸ್ಥಾನದ ರಾಜರೆಲ್ಲರೂ ಬಿಕ್ಕಟ್ಟುಗಳನ್ನು ಬಿಟ್ಟಾಕಿ ಒಕ್ಕಟ್ಟಿನಿಂದ ಭಾವೈಕ್ಯತೆಯ ಮಂತ್ರಪಠಿಸಿದರೆ, ಒಟ್ಟಾಗಿ ಆಂಗ್ಲರ ಮನೆಗಳಿಗೆ ಬೆಂಕಿಯಿಟ್ಟರೆ ಪರಕೀಯ ಪ್ರಭುತ್ವ ಸುಟ್ಟು ಬೂದಿಯಾಗುತ್ತದೆಂದು ಅಬ್ಬರಿಸಿದ ರಾಜಾವೆಂಕಟಪ್ಪ ನಾಯಕ ಹೋರಾಟದ ಜ್ವಾಲೆಯನ್ನು ಪ್ರಜ್ವಲಗೊಳಿಸಿದ. ಅದೇ ಸಂದರ್ಭದಲ್ಲಿ ದೇಶದ್ರೋಹಿಗಳ ಪಿತೂರಿಯಿಂದ ಸುರಪುರ ಸಂಸ್ಥಾನದ ಮೇಲೆ ಪ್ರವಾಹದೋಪಾದಿಯಲ್ಲಿ ಬ್ರಿಟಿಷ ಸೈನಿಕರು ಸಮರಸನ್ನದ್ಧರಾಗಿ ನುಗ್ಗಿ ಬಂದರು. ಸಂಸ್ಥಾನದ ಸೈನಿಕರು ಎದುರಾಳಿಗಳನ್ನು ಸದೆಬಡಿದು ಬ್ರಿಟಿಷಾಧಿಕಾರಿ ಕ್ಯಾಪ್ಟನ್ ನ್ಯೂಬೆರಿಯನ್ನು ಹಾಗೂ ಸಹಾಯಕ ಅಧಿಕಾರಿ ಸ್ಟುವರ್ಟನನ್ನು ಕೊಂದು ಹಾಕಿ ವೀರೋತ್ಸಾಹವನ್ನು ಮೆರೆದು ಗೆಲುವಿನ ನಗೆ ಬೀರಿದರು. ಆದರೆ ಸೋಲಿನಿಂದ ಕಂಗೆಟ್ಟ ಬ್ರಿಟಿಷ ಸೇನೆ, ಸೋಲಿನ ಸೇಡಿಗಾಗಿ ಕೇಡನ್ನು ಹರಸುತ್ತಾ ದುಮಾರ್ಗಗಳನ್ನೂ ಯೋಜಿಸಿತು. ನವಿನ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಅಪಾರ ಸೈನಿಕರೊಂದಿಗೆ ಸಂಸ್ಥಾನದ ಕೋಟೆಯನ್ನು ನಾಲ್ಕು ದಿಕ್ಕುಗಳಿಂದಲೂ ಸುತ್ತುವರಿದು, ಕೋಪೋದ್ರಿಕ್ತರಾಗಿ ಬರಸಿಡಿಲಿನಂತೆ ಬಂದಪ್ಪಳಿಸಿದರು.

ಭಿಮರಾಯ ಎಂಬ ದೇಶದ್ರೋಹಿಯು ರಾಜಾವೆಂಕಟಪ್ಪ ನಾಯಕನು ಸೆರೆಸಿಕ್ಕನೆಂದು ಸೈನಿಕರಿಗೆ ವದಂತಿ ನೀಡಿ ಉತ್ಸಾಹ ಕುಗ್ಗಿಸಿದನಲ್ಲದೆ, ಅತ್ತ ರಾಜನಿಗೆ ‘ನಮ್ಮ ಸೈನ್ಯ ಸೋತಿದೆ, ನೀವೂ ಇಲ್ಲಿಂದ ಹೊರಡುವುದೇ ಸೂಕ್ತ’ ಎಂದು ಪುಸಲಾಯಿಸಿದ. ಪರಿಸ್ಥಿತಿಗೆ ಶರಣಾದ ರಾಜ ಅಲ್ಲಿಂದ ಕಾಲ್ತೆಗೆಯುವಂತಾಯ್ತು. ಇತ್ತ ಸಮರೆಗೈಯುತ್ತಲೇ ಅಪಾರ ಸೈನಿಕರು ಪ್ರಾಣದ ಹಂಗು ತೊರೆದು ಹೋರಾಡಿದರು. ಗುರು ಗಂಗಾಧರೇಶ್ವರರು ರಚಿಸಿದ ವೀರಶೈವ ಹಂಡೆ ವಜೀರ ಸೈನಿಕರೆಲ್ಲರೂ ಪ್ರಾಣತ್ಯಾಗ ಮಾಡಿ ವೀರಸ್ವರ್ಗವನ್ನೇರಿದರು. ಕೊನೆಗೂ ರಾಜನನ್ನು ಬಂಧಿಸಿದರು. ಬಂಡುಕೋರನೆಂದು ಬಗೆದು ತನ್ನನ್ನು ತೋಪಿನ ಬಾಯಿಂದ ಉಡಾಯಿಸಿರಿ, ಆದರೆ ಕೊಲೆಗಾರನಂತೆ ಗಲ್ಲಿಗೆ ಹಾಕಬೇಡಿ’ಎಂದುತ್ತರಿಸಿದನು. ಪರಕೀಯರ ಆಶ್ರಯವೇ ಅಪಮಾನವೆಂದ ರಾಜನು, ಹೀಗೆ ಬಂಧಿಯಾಗಿ ಬಾಳುವುದಕ್ಕಿಂತ, ಕಪಿಮುಷ್ಠಿಗಳ ಕೈಯಲ್ಲಿ ಸಾವು ನೋವು ಅನಭವಿಸುವ ಬದಲು ಅಪ್ಪಟ ದೇಶಪ್ರೇಮಿಯಾಗಿ ಗುಂಡು ಹಾರಿಸಿಕೊಂಡು ಸಾಯುವುದೇ ಮೇಲೆನಿಸಿದಂತೆ ತೋರಿತು. ಹಾಗೆಯೇ ಆಯ್ತೆಂದು ಇತಿಹಾಸಕಾರರ ಅಂಬೋಣ. ಒಟ್ಟಾರೆ ವೀರಮರಣ ಹೊಂದಿದ ಸುರಪೂರದ ಸಮರ ವೀರ ಇಹಲೋಕ ತ್ಯಜಿಸಿದನು. ಸಂಸ್ಥಾನದ ಸೂರ್ಯ ಅಸ್ತಂಗತನಾಗಿ ತಾತ್ಯಾಟೋಪೆ, ಝಾನ್ಸಿ ರಾಣಿಯಂತೆ ಇತಿಹಾಸ ಪುಟ ಸೇರಿದ.

ಗುರು ಗಂಗಾಧರೇಶ್ವರರ (Gangadhareshwara Swamiji) ರಾಷ್ಟ್ರಭಕ್ತಿ ಹಾಗೂ ವೀರಸ್ವರ್ಗಸ್ಥರಾದ ಸೈನಿಕರ ತ್ಯಾಗ, ಬಲಿದಾನ, ರಾಜಾವೆಂಕಟಪ್ಪ ನಾಯಕನ ದಿಟ್ಟತನ ಹಾಗೂ ದೇಶಾಭಿಮಾನ ಇಂದಿನವರಿಗೆ ದಾರಿ ದೀಪವಾಗಲಿ ರಾಷ್ಟ್ರಾಭಿಮಾನಕ್ಕೆ ಪ್ರೇರಣೆಯಾಗಿ ದೇಶಪ್ರೇಮ ಬೆಳಗುವಂತಾಗಲಿ ಎಂಬುದು ಲೇಖನದಾಶಯ.

– ಡಿ.ಎನ್. ಪಾಟೀಲ (ಕರಡಕಲ್ಲ)
ಕನ್ನಡ ಅಧ್ಯಾಪಕರು

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!