ವಿಜಯಪುರ: ನಗರದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿ (Vijayapura Airport) ಸ್ಥಳಕ್ಕೆ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ (Minister Govind Karjol) ಭೇಟಿ ನೀಡಿ ಪರಿಶೀಲಿಸಿದರು.
ಕಾಮಗಾರಿಯ ಪ್ರಗತಿಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಕೇಳಿದರು. ಜುಲೈ 31ರವರೆಗೆ ಮೊದಲನೇ ಹಂತದ ಕಾಮಗಾರಿಯ ಭೌತಿಕ ಪ್ರಗತಿಯು ಶೇ.64 ಹಾಗೂ ಆರ್ಥಿಕ ಪ್ರಗತಿಯು 63.17 ರಷ್ಟಾಗಿದೆ. ಅದೇ ರೀತಿ ಎರಡನೇ ಹಂತದ ಕಾಮಗಾರಿಯ ಭೌತಿಕ ಪ್ರಗತಿಯು ಶೇ.10.34ರಷ್ಟು ಹಾಗೂ ಆರ್ಥಿಕ ಪ್ರಗತಿಯು ಶೇ.4.26ರಷ್ಟು ಸಾಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್-72ದಿಂದ ಏರ್ಬಸ್-320 ವಿಮಾನಗಳ ಹಾರಾಟಕ್ಕೆ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ರನ್ ವೇ, ಟ್ಯಾಕ್ಸಿ ವೇ, ಎಪ್ರಾನ್, ಇಸೋಲೇಶನ್ ಬೇ ಹಾಗೂ ಇತರೆ ಕಾಮಗಾರಿಗಳ ವಿನ್ಯಾಸದಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ಮೂರನೇ ಹಂತದ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅವಶ್ಯವಿರುವ 120 ಕೋಟಿ ರೂ.ಗಳಿಗೆ ಸರ್ಕಾರದಿಂದ ಅನುಮತಿ ದೊರೆತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿಮಾನ ನಿಲ್ದಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ರನ್ ವೇ, ಟ್ಯಾಕ್ಸಿ ವೇ, ಎಪ್ರಾನ್, ಇಸೋಲೇಶನ್ ಬೇ, ಕೂಡು ರಸ್ತೆ, ಒ¼ ರಸ್ತೆಗಳು, ಪೆರಿಫೆರಲ್ ರಸ್ತೆಗಳು ಹಾಗೂ ಇತರೆ ಕಾಮಗಾರಿಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿ.ಎಫ್.ಆರ್. ಕಟ್ಟಡ, ಸುತ್ತಲು ಕಂಪೌಂಡ್ ಗೋಡೆ ಹಾಗೂ ಇತರೆ ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಸಿವಿಲ್ ಉಪಕಾಮಗಾರಿಯಲ್ಲಿ ವಿಮಾನ ನಿಲ್ದಾಣದ (Vijayapura Airport) ಆವರಣದಲ್ಲಿರುವ ವಿದ್ಯುತ್ ಮಾರ್ಗಗಳ ಸ್ಥಳಾಂತರ, ವಿಮಾನ ನಿಲ್ದಾಣಕ್ಕೆ 24/7 ನೀರು ಸರಬರಾಜು, ವಿಮಾನ ನಿಲ್ದಾಣಕ್ಕೆ 2000 ಕಿಲೋ ವ್ಯಾಟ್ ನಿರಂತರ ವಿದ್ಯುತ್ ಸರಬರಾಜು ಹಾಗೂ ಇತರೆ ಕಾಮಗಾರಿಗಳನ್ನು ಸಹ ಬೇಗನೆ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ನಡೆಸಬೇಕಾದ ಪ್ರಕ್ರಿಯೆಗಳನ್ನು ತೀವ್ರಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಈ ವಿಮಾನ ನಿಲ್ದಾಣವನ್ನು ಎಟಿಆರ್-72 ದಿಂದ ಏರ್ಬಸ್-320 ವಿಮಾನಗಳ ಹಾರಾಟಕ್ಕೆ ಡಿಪಿಆರ್ ತಯಾರಿಸುವ, ಮತ್ತು ಅದಕ್ಕೆ ಸರ್ಕಾರದಿಂದ ಬೇಗನೇ ಅನುಮೋದನೆ ಪಡೆದು ಕಾಮಗಾರಿಯನ್ನು ಪ್ರಾರಂಭಿಸುವ ಪ್ರಕ್ರಿಯೆಯನ್ನು ಸಹ ಕಾಲಮಿತಿಯೊಳಗೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಒಂದೂವರೆ ತಿಂಗಳ ಬಳಿಕ ಮತ್ತೆ ಭೇಟಿ: ವಿಮಾನ ನಿಲ್ದಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸಲಾಗುತ್ತಿದೆ. ಕೆಲಸ ಮಾಡುವ ತಂಡಗಳನ್ನು ಹೆಚ್ಚಿಸಿ ಹೆಚ್ಚಿನ ಪ್ರಗತಿಯನ್ನು ತೋರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸರ್ಕಾರದ ಮಟ್ಟದಲ್ಲಿ ಏನಾದರು ಅಡೆತಡೆ ಇದ್ದರೆ ಅದನ್ನು ಸರಿಪಡಿಸಿಕೊಡುವುದಾಗಿ ತಿಳಿಸಲಾಗಿದೆ. ಸುಮಾರು 340 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಯ ಪ್ರಗತಿಯನ್ನು ನಿರಂತರ ಪರಿಶೀಲಿಸಲಾಗುತ್ತಿದ್ದು, ಒಂದೂವರೆ ತಿಂಗಳ ಬಳಿಕ ಮತ್ತೆ ತಾವು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ನವೀನ್ ಆರ್.ಕೆ., ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಸಿ.ಬಿ.ಚಿಕ್ಕಲಗಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಆರ್.ಕೆ.ಮುಜುಮದಾರ, ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರಾದ ರಾಠೋಡ್, ಕಾರ್ಯನಿರ್ವಾಹಕ ಅಭಿಯಂತರರಾದ ವಿ.ಆರ್.ಹಿರೇಗೌಡ, ವಿಮಾನ ನಿಲ್ದಾಣ ಗುತ್ತಿಗೆದಾರರಾದ ಎಸ್.ಎಸ್.ಆಲೂರ ಸೇರಿದಂತೆ ಇನ್ನೀತರರು ಇದ್ದರು.