- Advertisement -Newspaper WordPress Theme
ಹೋರಾಟ ವೀರರುಆಂಗ್ಲರಷ್ಟೇ ಅಲ್ಲ, ಪೊರ್ಚುಗೀಸರನ್ನು ಕಾಡಿದ್ದ ಇಂಚಗೇರಿ ಮಠದ ಮಾಧವಾನಂದ ಪ್ರಭುಜೀ

ಆಂಗ್ಲರಷ್ಟೇ ಅಲ್ಲ, ಪೊರ್ಚುಗೀಸರನ್ನು ಕಾಡಿದ್ದ ಇಂಚಗೇರಿ ಮಠದ ಮಾಧವಾನಂದ ಪ್ರಭುಜೀ

ಸ್ವಾತಂತ್ರ ಹೋರಾಟದಲ್ಲಿ (Freedom Fighter) ಪಾಲ್ಗೊಂಡ ರಾಷ್ಟ್ರದ ಬೆರಳೆಣಿಕೆ ಮಠಗಳಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಮಠವು (Inchageri Math) ಪ್ರಮುಖವಾಗಿದೆ. ತಮ್ಮ ಮಠದ ಸಾವಿರಾರು ಭಕ್ತರನ್ನು ಸ್ವಾತಂತ್ರ ಹೋರಾಟದಲ್ಲಿ ಧುಮುಕಿಸಿದ ಹೆಗ್ಗಳಿಕೆ ಇದೇ ಮಠದ ಮಠಾಧೀಶರಾಗಿದ್ದ ಮಾಧವಾನಂದ ಪ್ರಭುಜಿಗಳಿಗೆ (Madhavanand Prabhuji) ಸಲ್ಲುತ್ತದೆ.

ಇಂದಿಗೂ ಈ ಮಠದ ಸಾವಿರಾರು ಅನುಯಾಯಿಗಳು ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿ ಪಡೆದುಕೊಳ್ತಿದ್ದಾರೆ ಎನ್ನೊದೆ ಸೋಜಿಗ. ಇನ್ನು ಸ್ವಾತಂತ್ರ ನಂತರ ಮಠಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿಯವರ ಮೊಮ್ಮಗ ಅರುಣ ಗಾಂಧಿ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಮಾಧವಾನಂದರ ಕೊಡುಗೆ ಹಾಗೂ ಮಠದ ಪಾತ್ರದ ಬಗ್ಗೆ ವಿದೇಶಗಳಲ್ಲಿ ಅತ್ಯಧಿಕ ಪ್ರಸಾರ ಉಳ್ಳ “ದಿ ಇಂಪ್ರಿಂಟ್” ಇಂಗ್ಲಿಷ ಪತ್ರಿಕೆಯಲ್ಲಿ ಬರೆದಿದ್ದರು. ಇದನ್ನ ಓದಿದ ಅದೇಷ್ಟೋ ವಿದೇಶಿಗರು ಕೂಡ ಸಧ್ಯ ಶ್ರೀ ಮಠದ ಭಕ್ತರಾಗಿದ್ದಾರೆ.

ಆಕ್ರೋಶದ ಕಿಚ್ಚು:  1935 ರ ವೇಳೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮಾಧವಾನಂದ ಪ್ರಭುಜಿಗಳು ತಮ್ಮೊಂದಿಗೆ 20 ಸಾವಿರಕ್ಕೂ ಅಧಿಕ ಭಕ್ತರನ್ನ ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿದ್ದರು. 1929 ರ ಸಮಯದಲ್ಲಿ ತಮ್ಮ ಪ್ರಾಯದಲ್ಲೇ ಮಹಾದೇವರು ಬ್ರಿಟಿಷರ ಹುಟ್ಟಡಗಿಸಲು ನಿರ್ಧರಿಸಿ, ತಮ್ಮ ಅನುಯಾಯಿಗಳೊಂದಿಗೆ ಸೇರಿ ಹುಲಕೋಟೆ, ಸಾವಳಗಿ, ಇಂಚಗೇರಿ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನ ಅಪಹರಿಸಿದ್ದರು. ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ದರು. ಬ್ರಿಟಿಷರ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನ ಕಿತ್ತಹಾಕಿ ಠಾಣೆಗಳನ್ನ ಧ್ವಂಸಗೊಳಿಸಿದ್ದರು. ಇನ್ನು ಬ್ರಿಟಿಷ ಸರ್ಕಾರಕ್ಕೆ ಸೇರಬೇಕಿದ್ದ ಬೊಕ್ಕಸವನ್ನ ದೋಚಿದ್ದು ಆ ಸಮಯದಲ್ಲಿ ಬಾರಿ ಸಾಹಸ ಪ್ರಕರಣವಾಗಿತ್ತು. ಇದರ ಫಲವಾಗಿ 27 ಬಾರಿ ಜೈಲು ವಾಸ ಅನುಭವಿಸಿದ್ದಾರೆ.

ಪ್ರಮುಖ ಚಳುವಳಿಯಲ್ಲಿ ಭಾಗಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ಜನಿಸಿದ ಮಾಧವಾನಂದರು, ತಮ್ಮ 22 ನೇ ವಯಸ್ಸಿನಲ್ಲೆ ಸ್ವಾತಂತ್ರ್ಯ ಹೋರಾಟಲ್ಲಿ ಪಾಲ್ಗೊಂಡರು. ಚಲೇ ಜಾವ್ ಚಳುವಳಿ, ಉಪ್ಪಿನ ಸತ್ಯಾಗ್ರಹ, ಗೋವಾ ವಿಮೋಚನೆ ಸೇರಿದಂತೆ ಅನೇಕ ಹೋರಾಟಗಳಲ್ಲಿ ಮಾಧವಾನಂದ ಪ್ರಭುಜಿಗಳು ತಮ್ಮ ಮಠದ ಭಕ್ತರೊಂದಿಗೆ ಪಾಲ್ಗೊಂಡಿದ್ದರು. ಮಹಾತ್ಮಾ ಗಾಂಧೀಜಿ, ಸುಬಾಷ ಚಂದ್ರ ಬೋಸ್ ರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಜೈಲುವಾಸ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಳಿ ಇರುವ ಗಿರೀಶ ಆಶ್ರಮದಲ್ಲಿ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಮಾಧವಾನಂದ ಪ್ರಭುಜಿಗಳು ನಡೆಸಿದ ಗುಪ್ತ ಸಭೆಯಲ್ಲಿ ಸುಬಾಷಚಂದ್ರ ಬೋಸ್ ಪಾಲ್ಗೊಂಡಿದ್ದರು ಅನ್ನೋದು ಗಮನಾರ್ಹ. 1938 ರಲ್ಲಿ ಸ್ವಾತಂತ್ರ್ಯ ಹೋರಾಟ ಉಗ್ರ ಸ್ವರೂಪ ಪಡೆದಾಗ ಮಾಧವಾನಂದರು ತಮ್ಮ ಮಠದ ಭಕ್ತರೊಂದಿಗೆ ಜೈಲು ವಾಸ ಅನುಭವಿಸಿದ್ದರು. ಆ ಸಂದರ್ಭದಲ್ಲಿ ಮಾಧವಾನಂದರ ಉಗ್ರ ಸ್ವರೂಪದ ಹೋರಾಟ ಕಂಡ ಬ್ರಿಟಿಷ್ ಸರ್ಕಾರ ಅವರ ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿತ್ತು. ಅದರಂತೆ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಭಕ್ತರನ್ನ ಒಟ್ಟು ಗೂಡಿಸಲು ಮಾಧವಾನಂದರು ತಮ್ಮ ವಾಹನದಲ್ಲಿ ಹೊರಟಿದ್ದಾಗ ಬೆಳಗಾವಿ ಜಿಲ್ಲೆಯ ಗೋಕಾಕ್ ಬಳಿಯಲ್ಲಿ ಬ್ರಿಟಿಷ್ ಪೊಲೀಸರು ಇವರ ಮೇಲೆ ಗುಂಡು ಹಾರಿಸಿದರು.

ಪವಾಡವೇ ಸರಿ: ಹಲವು ಸುತ್ತು ಗಂಡು ಹಾರಿಸಿದ ಪೊಲೀಸರು ಬಂದು ನೋಡಿದಾಗ ಅಲ್ಲಿ ಮಾಧವಾನಂದರು ಇರಲೇ ಇಲ್ಲ. ಅವರು ಅಂದುಕೊಂಡಂತೆ ಗೋಕಾಕ ಬಳಿಯ ಹಳ್ಳಿಯೊಂದರಲ್ಲಿ ಸ್ವಾತಂತ್ರ್ಯ ಹೋರಾಟದ ಉದ್ದೇಶಕ್ಕಾಗಿ ನಡೆದ ಗುಪ್ತ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದನ್ನ ಮಾಧವಾನಂದ ಪ್ರಭುಜಿಗಳ ಪವಾಡ ಎನ್ನಲಾಗಿದೆ. ಈ ಚಮತ್ಕಾರವನ್ನ ಕಂಡಿದ್ದ ಬ್ರಿಟಿಷ್ ಪೊಲೀಸರು ಮತ್ಯಾವತ್ತು ಮಾಧವಾನಂದರ ಮೇಲೆ ಗುಂಡು ಹಾರಿಸುವ ಪ್ರಯ್ನಕ್ಕೆ ಹೋಗಲಿಲ್ಲವಂತೆ. ಹೀಗಾಗಿ ಮಾಧವಾನಂದರ ಅನುಯಾಯಿಗಳು ಅವರನ್ನ ದೇವರು ಅಂತಲೇ ಸಂಬೋದಿಸುತ್ತಿದ್ದರು. ಈಗಲು ಮಠದಲ್ಲಿ ಅದು ಜಾರಿಯಲ್ಲಿದೆ.

ಕರ್ನಾಟಕ ಏಕೀಕರಣದಲ್ಲಿ ಶ್ರೀಗಳ ಪಾತ್ರ:  ಕೇವಲ ಭಾರತ ಸ್ವಾತಂತ್ರ್ಯ ಅಷ್ಟೇ ಅಲ್ಲದೆ ಮಾಧವಾನಂದರು ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸಿ ಮೈಸೂರು ಕರ್ನಾಟಕವಾಗಬೇಕೆಂದು ಉಪವಾಸ ಸತ್ಯಾಗ್ರಹ ಮಾಡಿದ್ದರು. ಹೀಗಾಗಿ ಕರ್ನಾಟಕ ಸರ್ಕಾರ ಸುವರ್ಣ ಕರ್ನಾಟಕ ಸಂಭ್ರಮದ ಸಂದರ್ಭದಲ್ಲಿ ಮಾಧವಾನಂದ ಪ್ರಬುಜಿಗಳಿಗೆ ಮರಣೋತ್ತರವಾಗಿ “ಕರ್ನಾಟಕ ಏಕೀಕರಣ ಪ್ರಶಸ್ತಿ”ನೀಡಿ ಗೌರವಿಸಿದೆ.   

ಪೋರ್ಚುಗೀಸ್ ವಿರುದ್ಧ ಆಕ್ರೋಶ: ಇನ್ನು ಸ್ವಾತಂತ್ರ್ಯ ನಂತರ ಉಂಟಾದ ರೈತರು ಹಾಗೂ ಭೂ ಹಿಡುವಳಿದಾರರ ನಡುವಿನ ಸಂಘರ್ಷ, ರಜಾಕರ ಹಾವಳಿ ಹತ್ತಿಕ್ಕುವಲ್ಲು ಶ್ರೀಗಳ ಕೊಡುಗೆ ಅಪಾರವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವು ಗೋವಾ ಹಾಗೂ ದೀವ್, ದಮನ್ ದ್ವೀಪಗಳು ಪೋರ್ಚುಗೀಸ್ ಹಿಡಿತದಲ್ಲಿದ್ದು. ಇದನ್ನ ವಿರೋಧಿಸಿದ್ದ ಮಾಧವಾನಂದರು ಗೋವಾ ರಾಜ್ಯಧಾನಿ ಪಣಜಿಯಲ್ಲಿ ಭಾರತ ದೇಶ ಧ್ವಜ ಹಾರಾಡಿಸಿ ಪೋರ್ಚುಗಿಜರ ವಿರುದ್ಧ ಹೋರಾಟ ಮಾಡಿದ್ದರು. ಈ ಮೂಲಕ ಗೋವಾ ವಿಮೋಚನೆ ಮಾಡುವ ಮೂಲಕ ಗೋವಾ ರಾಜ್ಯವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡುವಲ್ಲಿ ಮಾಧವಾನಂದರ ಪಾತ್ರ ಹಿರಿದಾಗಿದೆ.

ಸಮಾನತೆಗೆ ಸಾಕ್ಷಿ: ಭಾರತ ಸ್ವಾತಂತ್ರ ಹೋರಾಟದಲ್ಲಿ ಉಗ್ರ ಸ್ವರೂಪದ ಹೋರಾಟದಿಂದಲೆ ಬ್ರೀಟಿಷರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಮಾಧವಾನಂದ ಪ್ರಬುಜಿಗಳು ಸಮಾಜದಲ್ಲಿಯ ಜಾತೀಯತೆ ಹೋಗಲಾಡಿಸಲು 20 ಸಾವಿರಕ್ಕೂ ಅಧಿಕ ಅಂತರ್ ಜಾತಿ, ಅಂತರ್ ಧರ್ಮಗಳ ಮದುವೆ ಮಾಡಿದ್ದಾರೆ. ಸ್ವತಃ ತಮ್ಮ ಮೊಮ್ಮಗಳನ್ನ ಮುಸ್ಲಿಂ ಸಮೂದಾಯದ ಯುವಕನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಈ ಮೂಲಕ ಸಮಾಜದಲ್ಲಿನ ಮೇಲು-ಕೀಳು, ಜಾತೀಯತೆ ಹೋಗಲಾಡಿಸಿ ಇಂಚಗೇರಿ ಮಠವನ್ನ ಜಾತ್ಯಾತೀತ ಮಠವನ್ನಾಗಿ (Inchageri Math) ರೂಪಿಸಿದ ಕೀರ್ತಿ ಮಾಧವಾನಂದ ಪ್ರಭುಜಿಗಳಿಗೆ ಸಲ್ಲುತ್ತದೆ.

ವಿದೇಶಿಗರ ಭಕ್ತಿಯ ತಾಣ: ವಿಶೇಷ ಅಂದರೆ 200 ವರ್ಷಗಳ ಹಿಂದೆ ಗುರುಲಿಂಗ ಜಂಗಮ ಮಹಾರಾಜರಿಂದ ಸ್ಥಾಪನೆಯಾದ ಮಠದ ತತ್ವಾದರ್ಶಗಳಿಗೆ ವಿದೇಶಿಗರು ಫಿದಾ ಆಗಿದ್ದಾರೆ. ಇಲ್ಲಿನ ಭಾಹುಸಾಹೇಬ ಮಹಾರಾಜರಿಂದ ಉಪದೇಶ ಪಡೆದ ಪ್ರಪಂಚದ ಮೂಲೆ ಮೂಲೆಯ ವಿದೇಶಿಗರ ವಂಶಜರು ಇಂದಿಗೂ ಮಠಕ್ಕೆ ನಡೆದುಕೊಳ್ತಾರೆ. ಮಾಘ ಸಪ್ತಾಹ ಕಾರ್ಯಕ್ರಮ ನಡೆಯುವ ಹಿಂದಿನ ರಷ್ಯಾ, ಜರ್ಮನಿ, ಇಟಲಿ, ಅಮೇರಿಕಾ ಸೇರಿದಂತೆ ಅನೇಕ ದೇಶಗಳಿಂದ ಮಠಕ್ಕೆ ಆಗಮಿಸಿ ಗುರುಗಳ ಗದ್ದುಗೆಗಳಿಗೆ ಪೂಜೆ ಸಲ್ಲಿಸುತ್ತಾರೆ.

ವಿಚಿತ್ರ ಅಂದ್ರೆ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿರುವ ಇಂಚಗೇರಿ ಸಾಂಪ್ರದಾಯದ ಪ್ರಾರ್ಥನೆ, ಭಜನೆಗಳನ್ನ ಕಲಿತು ಆರಾಧಿಸುತ್ತಾರೆ. ಮಠದ 7ನೇ ಧರ್ಮಾಧಿಕಾರಿಗಳಾಗಿದ್ದ ಗುರುಪುತ್ರಪ್ಪ ಮಹಾರಾಜರು ರಷ್ಯಾ ದೇಶದ ಜುಕೋಸ್ಲೋವಾಕಿಯಾ ದ ಪ್ರಾಗ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಹಾಗೇ ವಿಶ್ವದ ನಾನಾ ದೇಶಗಳ ಪರ್ಯಟನೆ ನಡೆಸಿದ್ದರು. ಹೀಗಾಗಿ ಮಠದ ತತ್ವಾದರ್ಶ, ಸಿದ್ದಾಂತಗಳಿಗೆ ಮನಸೋತ ಅದೇಷ್ಟೋ ವಿದೇಶಿಗರು ಇಂದಿಗೂ ಸಂಪ್ರದಾಯ ಮೆಚ್ಚಿ, ಕೊಂಡಾಡುತ್ತಿದ್ದಾರೆ.

– ಗುರುರಾಜ್ ಗದ್ದನಕೇರಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!