- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಹುತಾತ್ಮ ಯೋಧನಿಗೆ ಅಂತಿಮ ನಮನ. ಮೊಳಗಿದ ದೇಶಭಕ್ತಿ ಜೈಕಾರ

ಹುತಾತ್ಮ ಯೋಧನಿಗೆ ಅಂತಿಮ ನಮನ. ಮೊಳಗಿದ ದೇಶಭಕ್ತಿ ಜೈಕಾರ

ವಿಜಯಪುರ : ತಾಯ್ನಾಡಿಗಾಗಿ ಹೋರಾಡಿದ ಕೆಚ್ಚೆದೆಯ ಗಂಡುಗಲಿ ಬಸವನಾಡಿನ ಯೋಧನ ಮೃತದೇಹ ಇಂದು ಸ್ವಗ್ರಾಮ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮಕ್ಕೆ ಆಗಮಿಸಿದ್ದು, ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಯೋಧನ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಿ, ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ ಬಳಿಕ, ಬಸ್ ನಿಲ್ದಾಣದ ಬಳಿ ಇರುವ ಸರ್ಕಾರಿ ಜಾಗೆಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಅಂತ್ಯಕ್ರಿಯೆಯಲ್ಲಿ ಅನೇಕ ಗಣ್ಯರು, ಮಠಾಧೀಶರು ಸೇರಿದಂತೆ ಅಧಿಕಾರಿ ವರ್ಗದವರು ಹಾಜರಿದ್ದರು. ಉಕ್ಕಲಿ ಗ್ರಾಮದ ಕಾಶೀರಾಯ ಬೊಮ್ಮನಹಳ್ಳಿ (44) ಹುತಾತ್ಮನಾದ ಯೋಧನಿಗಾಗಿ ಕರುನಾಡೇ ಕಂಬನಿ ಮಿಡಿಯಿತು.

ಜುಲೈ 2 ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ಸದೆಬಡಿಯುವ ಕಾರ್ಯದಲ್ಲಿದ್ದ ವೇಳೆ ಹುತಾತ್ಮನಾಗಿದ್ದ ವೀರಯೋಧ ಕಾಶೀರಾಯ ಬೊಮ್ಮನಹಳ್ಳಿಯ ಪಾರ್ಥಿವ ಶರೀರ ಇಂದು ಸ್ವಗ್ರಾಮ ಉಕ್ಕಲಿಗೆ ಆಗಮಿಸಿತ್ತು. ಈ ವೇಳೆ ಜೈಕಾರಗಳೊಂದಿಗೆ ದೇಶಪ್ರೇಮಿಯ ಪಾರ್ಥಿವ ಶರೀರವನ್ನು ಸಾವಿರಾರು ಭಕ್ತ ಸಮೂಹ ಸೇರಿ ಸ್ವಾಗತಿಸಿದರು. ಇದೇ ವೇಳೆ ಮನೆ ಮಗನನ್ನ ನೆನೆದು ಕುಟುಂಬಸ್ಥರು ಕಣ್ಣೀರಿಟ್ಟರು. 

ಉಗ್ರರನ್ನ ಹೊಡೆದೇ ಸಾಯುತ್ತೇನೆ ಎನ್ನುತ್ತಿದ್ದ ಕಾಶೀರಾಯ : ಕಳೆದ ಗುರುವಾರವಷ್ಟೆ ಕರೆ ಮಾಡಿ ಮಾತಾಡಿದ್ದ ಯೋಧ, ಶುಕ್ರವಾರ ಹುತಾತ್ಮನಾಗಿರೊ ಸುದ್ದಿ ಬಂದಿತ್ತು. ಯೋಧ ಕಾಶೀರಾಯನಿಗೆ ಮದುವೆಯಾಗಿ 8 ವರ್ಷ ಕಳೆದಿದ್ದು, 7 ವರ್ಷದ ಪುತ್ರಿ, 5 ವರ್ಷ ಮಗನಿದ್ದಾನೆ. ಅಪ್ಪಟ ದೇಶ ಪ್ರೇಮಿಯಾಗಿದ್ದ ಯೋಧ ಕಾಶೀರಾಯ ಸರ್ವಿಸ್ ನಲ್ಲಿ 15 ವರ್ಷ ಕಳೆದಿದ್ದರು, ಉಗ್ರರ ಸೆದೆಬಡೆಯುವ ಛಲ ಹೊಂದಿದ್ದ ಯೋಧ ಊರಿಗೆ ಬಂದಾಗಲು ಉಗ್ರರನ್ನ ಬಿಡೋಲ್ಲ ಹೊಡೆದು ಬಿಸಾಕ್ತೀನಿ ಎನ್ನುತ್ತಿದ್ದನಂತೆ. ನಾನು ಹಾಗೇ ಸಾಯೊಲ್ಲ, ಉಗ್ರರನ್ನ ಹೊಡೆದೆ ಸಾಯುತ್ತೇನೆ ಎನ್ನುತ್ತಿದ್ದ ಕಾಶೀರಾಯ, ಕೊನೆಗೆ ಮೂವರು ಉಗ್ರರನ್ನ ಹೊಡೆದು ಹುತಾತ್ಮನಾದ ಎಂದು ಕಾಶೀರಾಯನ ಅಪ್ಪಟ ದೇಶಭಕ್ತಿಯನ್ನ ನೆನೆದು ತಂದೆ ಶಂಕ್ರಪ್ಪ ಕಣ್ಣೀರಿಟ್ಟಿದ್ದಾರೆ. 

ಮಾತು ನೆನೆದು ಕಣ್ಣೀರಿಟ್ಟ ಕುಟುಂಬ : ಯೋಧ ಕಾಶೀರಾಯ ಮಗನಿಗೂ ಸಹಿತ ಭಗತ್‌ಸಿಂಗ್ ಎಂದು ಹೆಸರಿಟ್ಟು ದೇಶಾಭಿಮಾನ ಮರೆದಿದ್ದನ್ನು ಕುಟುಂಬಸ್ಥರು ನೆನೆದರು. ಅಗಷ್ಟ 15, ಜನೇವರಿ 26ರ ಸಂದರ್ಭದಲ್ಲೆ ರಜೆ ಊರಿಗೆ ಬರುತ್ತಿದ್ದ, ಊರಿಗೆ ಬಂದಾಗ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತಿದ್ದ ಯೋಧ. ಯೋಧನ ಪತ್ನಿ ಸಂಗೀತಾ, ತಾಯಿ ಶಾಂತಾಬಾಯಿ ಆಕ್ರಂದನ ಮುಗಿಲು ಮುಟ್ಟಿತ್ತು, ಕಣ್ಣೀರು ಹೊಳೆಯಂತೆ ಹರಿಯುತ್ತಿತ್ತು. ಇನ್ನು ಕಳೆದ ಗುರುವಾರ ಕರೆ ಮಾಡಿದ್ದ ವೇಳೆ ಉಗ್ರರ ಹುಡುಕಾಟಕ್ಕೆ ಹೋಗ್ತಿದ್ದೀವಿ. ಯಾವಾಗ ಕರೆ ಬರುತ್ತೊ ಆಗ ಹೋಗಬೇಕು. ಮುಂದಿನ ವಾರವೇ ರಜೆ ಹಾಕಿ ಊರಿಗೆ ಬರಲಿದ್ದೇನೆ ಎಂದು ಯೋಧ ಕಾಶೀರಾಯ ಹೇಳಿದ್ದನಂತೆ ಇದೆಲ್ಲವನ್ನು ನೆನೆದು ಕುಟುಂಬಸ್ಥರು ಕಣ್ಣೀರಿಟ್ಟರು.

ಸಾರ್ಥಕ ಸೇವೆ : ಪೂರ್ತಿ ಹೆಸರು ಕಾಶೀರಾಯ್ ಶಂಕ್ರಪ್ಪ ಬೊಮ್ಮನಹಳ್ಳಿ 30-06-1986ರಲ್ಲಿ ಜನಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಉಕ್ಕಲಿ ಗ್ರಾಮದಲ್ಲಿ ಮುಗಿಸಿದ್ದರು. ಬಳಿಕ ಪಿಯುಸಿ ಕಾಮರ್ಸ್ ವಿಜಯಪುರದಲ್ಲಿ ಮುಗಿಸಿದ್ದರು. ನಂತರದಲ್ಲಿ 2005 ರಲ್ಲಿ ಸೇನೆಗೆ ಆಯ್ಕೆಯಾಗಿ, 2006 ರಲ್ಲಿ ಸೇನೆ ಸೇವೆಗೆ ಸೇರಿದ್ದರು. ಬೆಂಗಳೂರಿನ MRG ಸೆಂಟರ್ ನಲ್ಲಿ ಎರಡೂವರೇ ವರ್ಷ ಮೊದಲ ಸೇವೆ ಸಲ್ಲಿಸಿದ ಬಳಿಕ ಪಟಿಯಾಲ (ಪಂಜಾಬ್) 3 ವರ್ಷ ಸೇವೆ. ಜಮ್ಮುವಿನ ಪುಲ್ವಾಮಾದಲ್ಲಿ 3 ವರ್ಷ ಸೇವೆ. ಬಡಿಯಾಂಡಾ( ಪಂಜಾಬ್) 2 ವರ್ಷ ಸೇವೆ ಮತ್ತೆ ವಾಪಸ್ ಜಮ್ಮು ಪುಲ್ವಾಮಾದ 44RRನಲ್ಲಿ(ರಾಷ್ಟೀಯ ರೈಫಲ್) ವಾಲೇಂಟರಿ ತೆಗೆದುಕೊಂಡು ಸೇವೆ ಸಲ್ಲಿಸುತ್ತಿದ್ದರು. ಸುಮಾರು 9-10 ಬಾರಿ ಉಗ್ರರ ಜೊತೆಗಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಹೆಮ್ಮೆ ಇವರದ್ದಾಗಿತ್ತು. 2013 ರಲ್ಲಿ ಸಂಗೀತಾ ಎಂಬುವವರೊಂದಿಗೆ ವಿವಾಹವಾಗಿದ್ದು, 7 ವರ್ಷದ ಪೃಥ್ವಿ ಹಾಗೂ 4 ವರ್ಷದ ಭಗತ್ ಸಿಂಗ್ ಎಂಬ ಪುತ್ರನಿದ್ದಾನೆ.

ಶಪಥಗೈದ ಯೋಧನ ಪತ್ನಿ : ಇನ್ನು ಮಗನನ್ನು ಸ್ಟ್ರಾಂಗ್ ಮಾಡು ಅವನನ್ನು ಸೇನೆಗೆ ಸೇರಿಸೋಣ ಎನ್ನುತ್ತಿದ್ದನಂತೆ ವೀರಯೋಧ ಕಾಶೀರಾಯ. ಹೀಗಾಗಿ ಮಗನನ್ನು ಗಟ್ಟಿಯಾಗಿಸಿ ಸೇನೆಗೆ ಸೇರಿಸುತ್ತೇನೆ ಎಂದು ಅಂತ್ಯಕ್ರಿಯದ ವೇಳೆ ಯೋಧನ ಪತ್ನಿ ಸಂಗೀತಾ ಶಪಥ ಮಾಡಿದರು. ದೇಶದ್ರೋಹಿಗಳ ವಿರುದ್ಧ ಸದಾ ಕೆಚ್ಚೆದೆಯಿಂದ ಹೋರಾಡುತ್ತಿದ್ದ ವೀರಯೋಧನ ಎದೆಗೆ ಉಗ್ರರ ಗುಂಡು ತಾಗಿತ್ತು. ತಾನು ಹೇಳುತ್ತಿದ್ದಂತೆಯೇ ಉಗ್ರಗಾಮಿಗಳೊಂದಿಗೆ ಹೋರಾಡುತ್ತಲೇ ವೀರಮರಣವನ್ನಪ್ಪಿದ್ದ ಯೋಧ ಕಾಶೀರಾಯನ ನೆನಪು ಅಮರವಾಗಿರಲಿದೆ.

ಅಂತಿಮ ನಮದಲ್ಲಿ ಗಣ್ಯರು : ಯೋಧನ ಅಂತ್ಯಕ್ರಿಯೆಯಲ್ಲಿ ಗಣ್ಯರು, ಅಧಿಕಾರಿಗಳು ಭಾಗಿಯಾದರು. ಯರನಾಳ ವಿರಕ್ತಮಠ ಸಂಗನಬಸವ ಸ್ವಾಮಿಜೀ, ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್, ಬಿಜೆಪಿ ಮಾಜಿ ಶಾಸಕ ಎಸ್ ಕೆ ಬೆಳ್ಳುಬ್ಬಿ, ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ್ ಮನಗೂಳಿ, ಜಿಲ್ಲಾಧಿಕಾರಿ ಪಿ ಸುನೀಲ್‌ಕುಮಾರ್ ರಿಂದ ಅಂತಿಮ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!